

ಉಡುಪಿ: ಜನವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನಿಷ್ಠ 10 ಸಾವಿರ ರೂ. ಗೌರವಧನ ನೀಡುತ್ತೇವೆ ಎಂಬುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಗೌರವಧನ ಘೋಷಣೆಯಾಗಿಲ್ಲ. ಬಜೆಟ್ನಲ್ಲಿಯೂ ಉಲ್ಲೇಖವಿಲ್ಲ. ಇದೊಂದು ವಚನ ಭ್ರಷ್ಟ್ಟ ಸರ್ಕಾರ ಎಂದು ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ. ಭಟ್ ಆರೋಪಿಸಿದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ನಡೆದ ಧರಣಿಯಲ್ಲಿ ಅವರು ಮಾತನಾಡಿದರು.
ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಆಗಬೇಕು. ಘೋಷಣೆ ಮಾಡಿದ 10 ಸಾವಿರ ರೂ. ಗೌರವಧನವನ್ನು ಕೂಡಲೇ ಜಾರಿಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಉಡುಪಿ ಜಿಲ್ಲಾಧ್ಯಕ್ಷೆ ಸುಹಾಸಿನಿ ಮಾತನಾಡಿ, ಎಪ್ರಿಲ್ ತಿಂಗಳಿಗೆ ಅನ್ವಯವಾಗುವಂತೆ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ 10 ಸಾವಿರ ರೂ. ಗೌರವಧನ ನೀಡಬೇಕು. ರಾಜ್ಯ ಬಜೆಟ್ ನಲ್ಲಿ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ 1 ಸಾವಿರ ಪ್ರೋತ್ಸಾಹಧನ ಹೆಚ್ಚಳ ಮಾಡಿದಂತೆ ಆಶಾ ಕಾರ್ಯಕರ್ತೆಯರಿಗೂ ಹೆಚ್ಚಳ ಮಾಡಬೇಕು. ಜನಸಂಖ್ಯಾ ಮಿತಿ ಹೆಚ್ಚಿಸುವ ನೆಪದಲ್ಲಿ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು. ನಿವೃತ್ತ ಆಶಾಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು ಎಂದು ಒತ್ತಾಯಿಸಿದರು. ಕಾರ್ಯದರ್ಶಿ ಉಮಾ ಕೆ.ಎಸ್., ಉಡುಪಿ ತಾಲೂಕು ಅಧ್ಯಕ್ಷೆ ಶಾಂಭವಿ ಕುಲಾಲ್, ಕಾರ್ಕಳ ತಾಲೂಕು ಅಧ್ಯಕ್ಷೆ ಯಶೋದಾ, ಕುಂದಾಪುರ ತಾಲೂಕು ಅಧ್ಯಕ್ಷೆ ಭಾರತಿ ವಂಡ್ಸೆ ಪಾಲ್ಗೊಂಡಿದ್ದರು.