

ಮಡಿಕೇರಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನ್ಮ ದಿನದ ಅಂಗವಾಗಿ ಕಾಂಗ್ರೆಸ್‌ನ ಕೊಡಗು ಜಿಲ್ಲಾ ಸಮಿತಿಯಿಂದ ಮಡಿಕೇರಿಯಲ್ಲಿ ಕೋವಿಡ್-19 ಸೇನಾನಿಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಂಗ್ರೆಸ್ ಮುಖಂಡ ಟಿ.ಪಿ.ರಮೇಶ್ ಮಾತನಾಡಿ, ಕರೊನಾ ವೈರಸ್ ತಡೆಗಟ್ಟಲು ಸೇನಾನಿಗಳು ಹಗಲಿರುಳು ದುಡಿದಿದ್ದಾರೆ. ದೇಶದಲ್ಲಿ ಲಕ್ಷಾಂತರ ಜನರು ಸೋಂಕಿಗೆ ತುತ್ತಾಗಿದ್ದಾಗ, ಕೊಡಗನ್ನು ರಕ್ಷಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ ಎಂದರು.
ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉತ್ತಮ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಗ್ರಾಮೀಣ ಮಟ್ಟದಲ್ಲೂ ಹೆಚ್ಚಿನ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡುಬರುತ್ತಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಕರೊನಾದಿಂದ ದೇಶವನ್ನು ರಕ್ಷಿಸಬೇಕಿದೆ ಎಂದರು.
ಹಿರಿಯ ವೈದ್ಯಾಧಿಕಾರಿ ಡಾ.ಗೋಪಿನಾಥ್ ಮಾತನಾಡಿ, ಕರೊನಾ ವಿರುದ್ಧದ ಯುದ್ಧದಲ್ಲಿ ಮೂರೂವರೆ ತಿಂಗಳಿನಿಂದ ತೊಡಗಿಸಿಕೊಂಡಿದ್ದೇವೆ. ಆದರೆ ಇನ್ನೂ ಯುದ್ಧ ಮುಗಿದಿಲ್ಲ. ವೈರಸ್ ತೊಲಗಿಸಲು ಪ್ರತಿಯೊಬ್ಬರೂ ಪಣತೊಡಬೇಕು. ಮಾಸ್ಕ್ ಧರಿಸಿ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದರು.
ಡಾ.ಆನಂದ್ ಮಾತನಾಡಿ, ಜಿಲ್ಲೆಯಲ್ಲಿ ಕ್ಷಯ ರೋಗ ಹೆಚ್ಚಾಗಿ ಹರಡಿಲ್ಲ. ಎರಡು ವಾರಕ್ಕಿಂತ ಜಾಸ್ತಿ ಕೆಮ್ಮು ಇದ್ದರೆ ಸಂಶಯಾಸ್ಪದ ಕ್ಷಯ ವ್ಯಕ್ತಿ ಎಂದು ಪರೀಕ್ಷೆ ಮಾಡಲಾಗುತ್ತದೆ. ಕ್ಷಯ ರೋಗದ ಲಕ್ಷಣ ಕಂಡು ಬಂದರೆ ಅಂತಹವರಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಇದೇ ಸಂದರ್ಭ 17 ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್‌ಕುಮಾರ್, ವಿರಾಜಪೇಟೆ ಬ್ಲಾಕ್ ವೀಕ್ಷಕ ಪಿ.ರಾಜು, ಪಕ್ಷದ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು, ಆರೋಗ್ಯ ಇಲಾಖೆಯ ಪ್ರಮುಖರು ಇದ್ದರು.