

ಗದಗ: ಆಶಾ ಕಾರ್ಯಕರ್ತೆಯರನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ತರಬೇತಿ ನೀಡಲಾಗುತ್ತಿದೆ. ನಂತರ ವಿದ್ಯಾರ್ಹತೆ ಎಂಬ ಮಾನದಂಡ ಅನ್ವಯವಾಗುವಂತೆ ಮಾಡಿ ಕೆಲಸದಿಂದ ವಜಾಗೊಳಿಸಲಾಗುತ್ತಿದೆ. ಯಾವುದೇ ಆಶಾಕಾರ್ಯಕರ್ತೆಯರನ್ನು ತೆಗೆದು ಹಾಕದಂತೆ ಹಾಗೂ ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ರಾಜ್ಯಾದ್ಯಂತ ಆ. 12, 13 ಹಾಗೂ 14ರಂದು ಆಹೋರಾತ್ರಿ ಧರಣಿ ನಡೆಸಲಾಗುತ್ತಿದೆ ಎಂದು ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಶಾಕಾರ್ಯಕರ್ತೆಯರು 17 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ಗ್ರಾಮಿಣ ಭಾಗದಲ್ಲಿ ಸೇವೆ ಮಾಡುತ್ತಿದ್ದೇವೆ. ಆಶಾ ಕಾರ್ಯಕರ್ತೆಯರ ಸೇವೆಯಿಂದ ಗ್ರಾಮೀಣ ಮತ್ತು ನಗರ ಭಾಗದಲ್ಲಿ ಶಿಶು ಮರಣ, ತಾಯಿ ಮರಣದ ಪ್ರಮಾಣ ಗಣನೀಯ ಇಳಿಕೆಯಾಗಿದೆ. ಸರ್ಕಾರದಿಂದ ನೀಡುವ 5 ಸಾವಿರ ರೂ.ಗಳ ಪ್ರೋತ್ಸಾಹಧನವನ್ನು 15 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಗೌರವಾಧ್ಯಕ್ಷ ಸುರೇಶ ಜಿ., ಭಾಗ್ಯಜ್ಯೋತಿ, ಲಕ್ಷ್ಮೀ ಪೂಜಾರ, ಗೌರಮ್ಮ ಕಟ್ಟಿಮನಿ, ಪ್ರೇಮಾ ಪಾಟೀಲ, ರಮಿಜಾ ಹಾವೇರಿ, ಸುಮಂಗಲಾ ತಳವಾರ, ಮಂಜುಳಾ ಹೊಸೂರ, ಅನ್ನಪೂರ್ಣಾ ಖಾಟವಾ, ಗೀತಾ ಭಜಂತ್ರಿ, ಶಾಹಿನ್ ಅಲ್ಮಾಸ್ ಇತರರಿದ್ದರು.