

ಬಳ್ಳಾರಿ: ರಾಜ್ಯದ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ನೀಡಲು ಸಹಕಾರ ಸಂಘದಿಂದ 12.07 ಕೋಟಿ ರೂ. ಮೀಸಲಿಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ನಗರದ ಬಿಡಿಡಿಎ ಸಭಾಂಗಣದಲ್ಲಿ ಶುಕ್ರವಾರ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನದ ಚೆಕ್ ವಿತರಿಸಿ ಮಾತನಾಡಿದರು. ಕರೊನಾದಂತ ಸಂದಿಗ್ಧ ಪರಿಸ್ಥಿತಿಯಲ್ಲೂ ಎದೆಗುಂದದೆ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆ ಅನನ್ಯ. ಹೀಗಾಗಿ ಅವರಿಗೆ ಸಹಾಯವಾಗಲೆಂದು ಸರ್ಕಾರದಿಂದ ಪ್ರೋತ್ಸಾಹ ಧನ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಮಾತನಾಡಿ, ಇಡೀ ವಿಶ್ವವನ್ನೇ ಕರೊನಾ ಅಲ್ಲಾಡಿಸುತ್ತಿದೆ. ಇದರಿಂದ ಆರ್ಥಿಕ ಕುಸಿತ ಎದುರಾಗಿದೆ. ಇದನ್ನು ಹೋಗಲಾಡಿಸುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ. ಜತೆಗೆ ಪ್ರಕೃತಿಗೆ ತೊಂದರೆ ಕೊಟ್ಟರೆ ಏನೆಲ್ಲ ಸಂಕಷ್ಟ ಎದುರಾಗುತ್ತದೆ ಎನ್ನುವುದಕ್ಕೆ ಕರೊನಾ ನಿದರ್ಶನ ಎಂದರು.
ಶಾಸಕ ಜಿ.ಸೋಮಶೇಖರ ರೆಡ್ಡಿ ಮಾತನಾಡಿ, ಮಳೆ, ಬಿಸಿಲು ಎನ್ನದೇ ಕರೊನಾ ನಿಯಂತ್ರಣದಲ್ಲಿ ಅವಿರತವಾಗಿ ಆಶಾ ಕಾರ್ಯಕರ್ತೆಯರು ಶ್ರಮಿಸುತ್ತಿದ್ದಾರೆ. ಹೀಗಾಗಿ ವೈಸರ್ ನಿಯಂತ್ರಣದಲ್ಲಿದೆ. ಅದರಲ್ಲೂ ಜಿಲ್ಲೆ ಸೋಂಕು ಮುಕ್ತವಾದರೆ ಕಾರ್ಯಕರ್ತೆಯರಿಗೆ ಊಟ ಹಾಕಿಸುವೆ ಎಂದರು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಸಹಕಾರ ಸಂಘದ ಜಂಟಿ ನಿಬಂಧಕ ಗೋಪಾಲ ಚೌಹಾಣ, ಸಹಕಾರಿ ಇಲಾಖೆಯ ಉಪ ನಿಬಂಧಕಿ ಸುನೀತಾ ಸಿದ್ರಾಮ್ ಹಾಗೂ ಆಶಾ ಕಾರ್ಯಕರ್ತೆಯರಿದ್ದರು.