97 ಅಂಗನವಾಡಿ ಕಾರ್ಯಕರ್ತೆಯರಿಗೆ ಕರೊನಾ ; 46 ಸಹಾಯಕಿಯರಿಗೆ ಸೋಂಕು ; ಸಿಬ್ಬಂದಿಗಿಲ್ಲ ಮಾಸ್ಕ್, ಕೈಗವುಸು, ಸ್ಯಾನಿಟೈಸರ್

01Tmk_Anganwadi_Corona_01a
Published on

ತುಮಕೂರು : ಕರೊನಾ ಎರಡನೇ ಅಲೆಯ ಆರ್ಭಟಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಲುಗಿದ್ದಾರೆ. ಕಳೆದ 2 ತಿಂಗಳಲ್ಲಿ 97 ಕಾರ್ಯಕರ್ತೆಯರು ಹಾಗೂ 46 ಸಹಾಯಕಿಯರು ಕರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಹಳ್ಳಿಹಳ್ಳಿಗೂ ಸೋಂಕು ವ್ಯಾಪಕವಾಗಿ ಹಬ್ಬಿರುವ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆಯಲ್ಲಿ ಆಶಾ ಕಾರ್ಯಕರ್ತೆಯರ ಜತೆ ಜೀವದ ಹಂಗು ತೊರೆದು ಮಂಚೂಣಿಯಲ್ಲಿರುವ ಕಾರ್ಯಕರ್ತೆಯರೀಗ ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅಲ್ಲದೆ, ಅವರ ಕುಟುಂಬವನ್ನು ಕಷ್ಟಕ್ಕೆ ದೂಡಿದ್ದಾರೆ. ಹಳ್ಳಿಗಳಲ್ಲಿ ಸೋಂಕಿತರನ್ನು ಭೇಟಿ ಮಾಡುವ ಅಂಗನವಾಡಿ ಕಾರ್ಯಕರ್ತೆಯರು ಸೂಕ್ತ ಸುರಕ್ಷತಾ ಸಾಧನಗಳಿಲ್ಲದೆ ಸೋಂಕಿಗೆ ತುತ್ತಾಗಿದ್ದಾರೆ.

ಕರೊನಾ ಸೇನಾನಿಗಳಾಗಿ ಗುರುತಿಸಿಕೊಂಡಿರುವ ಅಂಗನವಾಡಿ ಸಿಬ್ಬಂದಿ ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರ ಆಕ್ಸಿಜನ್ ಮಟ್ಟ ತಪಾಸಣೆ, ಔಷಧಗಳ ಜತೆಗೆ ಮನೆ, ಮನೆಗೆ ಫುಡ್‌ಕಿಟ್‌ಗಳನ್ನು ತಲುಪಿಸುವ ಕಾರ್ಯದಲ್ಲಿ ಸೇನಾನಿಗಳಂತೆ ದುಡಿಯುತ್ತಿದ್ದಾರೆ. ಫೇಸ್ ಶೀಲ್ಡ್, ಕೈಗವಸು ಗುಣಮಟ್ಟದ ಮಾಸ್ಕ್ ಜತೆಗೆ ಸ್ಯಾನಿಟೈಸರ್ ಕೂಡ ಇಲ್ಲದೆ ಸ್ವಂತ ದುಡ್ಡಿನಲ್ಲೇ ಖರೀದಿಸಿದ ಬಟ್ಟೆ ಮಾಸ್ಕ್‌ಗಳನ್ನೇ ಧರಿಸಿ ಹಳ್ಳಿ, ಹಳ್ಳಿ ಸುತ್ತುತ್ತಿರುವುದು ಕಂಡುಬಂದಿದೆ.

ಶೇ.93 ಸಿಬ್ಬಂದಿಗೆ ಲಸಿಕೆ: ಜಿಲ್ಲೆಯಲ್ಲಿ 4109 ಅಂಗನವಾಡಿ ಕಾರ್ಯಕರ್ತೆಯರಲ್ಲಿ 3826 ಮಂದಿ ಕರೊನಾ ಲಸಿಕೆ ಪಡೆದಿದ್ದಾರೆ. ಶೇ.93.11 ವ್ಯಾಕ್ಸಿನೇಷನ್ ಪಡೆದಿದ್ದಾರೆ. 3590 ಅಂಗನವಾಡಿ ಸಹಾಯಕಿಯರಲ್ಲಿ 3240 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಶೇ.90.42ವ್ಯಾಕ್ಸಿನೇಷನ್ ಆಗಿದೆ. ಇಷ್ಟಾದರೂ 145 ಅಂಗನವಾಡಿ ಸಿಬ್ಬಂದಿ ಸೋಂಕಿಗೆ ತುತ್ತಾಗಿರುವುದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಆತಂಕಕ್ಕೀಡುಮಾಡಿದೆ.

ಪ್ರತೀ ಕೆಲಸಕ್ಕೂ ಅಂಗನವಾಡಿ ಸಿಬ್ಬಂದಿ : ಗ್ರಾಪಂ ಟಾಸ್ಕ್‌ಫೋರ್ಸ್ ಸಭೆ, ಆರೋಗ್ಯ ಸಮೀಕ್ಷೆ ಇರಲಿ, ಲಸಿಕೆ ಹಾಕಿಸಲು ಲಸಿಕಾ ಕೇಂದ್ರಕ್ಕೆ ಕರೆತರುವುದಿರಲಿ ಪ್ರತಿಯೊಂದು ಆರೋಗ್ಯ ಸೇವೆಗೂ ಅಂಗನವಾಡಿ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ. ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರ ಆರೋಗ್ಯ ತಪಾಸಣೆ, ಔಷಧ ವಿತರಣೆ, ಕೋವಿಡ್ ಕೇರ್ ಸೆಂಟರ್ ಜತೆಗೆ ಸೋಂಕಿತರನ್ನು ಮನವೊಲಿಸಿ ಕಳುಹಿಸುವುದು, ಇಲಾಖೆ ಫಲಾನುಭವಿಗಳಿಗೆ ಆಹಾರ ಪೂರೈಕೆ ಮಾಡುವ ಅಂಗನವಾಡಿ ಕಾರ್ಯಕರ್ತೆಯರು ಕರೊನಾ ಸೇನಾನಿಗಳಾಗಿ ಯಾವುದೇ ವಿಶೇಷ ಭತ್ಯೆಗಳಿಲ್ಲದೆ ದುಡಿಯುತ್ತಿದ್ದಾರೆ.

ಹಳ್ಳಿಗಳಲ್ಲಿ ಪ್ರತೀ ಮನೆಗೂ ಹೋಗಿ ಸೋಂಕಿತರ ಆರೋಗ್ಯ ತಪಾಸಣೆ ಮಾಡುವ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆಯರ ಹೆಗಲಿಗೆ ವಹಿಸಲಾಗಿದೆ. ಫೇಸ್ ಶೀಲ್ಡ್ ಆಗಲಿ, ಕೈಗವುಸಾಗಲಿ, ಉತ್ತಮ ಗುಣಮಟ್ಟದ ಮಾಸ್ಕ್ ಕೂಡ ನೀಡಿಲ್ಲ. ಇದರಿಂದ ನೂರಾರು ಅಂಗನವಾಡಿ ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದಾರೆ. ರಾಜ್ಯದಲ್ಲಿ ಮೊದಲ ಅಲೆಗೆ ಸೋಂಕಿಗೆ ಬಲಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಈವರೆಗೆ ಪರಿಹಾರ ನೀಡಿಲ್ಲ. ಜಿ.ಕಮಲ, ಅಧ್ಯಕ್ಷೆ, ರಾಜ್ಯ ಅಂಗನವಾಡಿ ನೌಕರರ ಜಿಲ್ಲಾ ಸಮಿತಿ ಜಿಲ್ಲೆಯಲ್ಲಿ ಅಂಗನವಾಡಿ ಸಿಬ್ಬಂದಿ ಸುರಕ್ಷತೆಗೆ ಒತ್ತುಕೊಡಲಾಗಿದೆ. ಎಲ್ಲ ಗ್ರಾಪಂ, ತಹಸೀಲ್ದಾರ್ ಮೂಲಕ ಮಾಸ್ಕ್, ಕೈಗವುಸು, ಸ್ಯಾನಿಟೈಸರ್ ಅನ್ನು ಸಿಬ್ಬಂದಿಗೆ ನೀಡಲಾಗಿದೆ. ಈವರೆಗೆ ಎರಡನೇ ಅಲೆಯಲ್ಲಿ 143 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಇವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ. ಮೊದಲ ಅಲೆ ಸಂದರ್ಭದಲ್ಲಿ ಓರ್ವ ಅಂಗನವಾಡಿ ಕಾರ್ಯಕರ್ತೆ ರಾಜಮ್ಮ ಮೃತಪಟ್ಟಿದ್ದು ಅವರ ಕುಟುಂಬಕ್ಕೆ 30 ಲಕ್ಷ ರೂ., ಪರಿಹಾರವನ್ನು ಇಲಾಖೆ ವತಿಯಿಂದ ನೀಡಲಾಗಿದೆ. ಎಸ್.ನಟರಾಜು, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net