

ಬೆಳಗಾವಿ: ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಆಗಮಿಸಿರುವ 62 ಜನರ ಪೈಕಿ 33 ಜನರನ್ನು ನಗರದ ಬಿಮ್ಸ್‌ನಲ್ಲಿ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಈಗಾಗಲೇ 14 ದಿನಗಳ ಕ್ವಾರಂಟೈನ್‌ನ ಮುಗಿದಿರುವವರ ಮೇಲೆ ವೈದ್ಯರು, ಪೊಲೀಸರು ವಿಶೇಷ ನಿಗಾ ವಹಿಸಿದ್ದಾರೆ. ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುವುದು. ಕರೊನಾ ಹರಡುವುದನ್ನು ಸಂಪೂರ್ಣವಾಗಿ ನಿಯಂತ್ರಿಸಲು ನಗರ, ತಾಲೂಕು ಮಟ್ಟದಲ್ಲಿರುವ ಹೋಟೆಲ್‌ಗಳನ್ನು ಕ್ವಾರಂಟೈನ್‌ಗಳಾಗಿ ಬಳಕೆ ಮಾಡಿಕೊಳ್ಳಲು ಅಲ್ಲಲ್ಲಿ ಗುರುತಿಸಿಕೊಳ್ಳಲಾಗಿದೆ.
ಅನಿವಾರ್ಯತೆ ಬಂದರೆ ಅವರೆಲ್ಲರನ್ನು ಮನೆಯಲ್ಲಿ ಕ್ವಾರಂಟೈನ್‌ನಲ್ಲಿಡುವ ಬದಲಾಗಿ ಹೋಟೆಲ್, ವಸತಿ ನಿಲಯಗಳಲ್ಲಿಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟೂ 527 ಜನರ ಮೇಲೆ ನಿಗಾ ಇಡಲಾಗಿದೆ. 263 ಜನರನ್ನು ಕ್ವಾರಂಟೈನ್‌ನಲ್ಲಿಡಲಾಗಿದ್ದು, 184 ಜನರು ಕ್ವಾರಂಟೈನ್‌ನ 14 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. 74 ಜನರನ್ನು 28 ದಿನಗಳ ಐಸೋಲೇಷನ್ ಅವಧಿ ಪೂರ್ಣಗೊಂಡಿದ್ದು, ಕರೊನಾ ಲಕ್ಷಣಗಳು ಕಂಡು ಬಂದಿಲ್ಲ.