ಗಣೇಶ ಮಹೋತ್ಸವದ ಅಂಗವಾಗಿ ವಿವಿಧೆಡೆ ಮೂರ್ತಿ ಪ್ರತಿಷ್ಠಾಪನೆ

sadesh_4
Published on

ಮೈಸೂರು: ಗೌರಿ-ಗಣೇಶ ಹಬ್ಬ ಆಚರಣೆ ಅಂಗವಾಗಿ ನಗರದ ಪ್ರಮುಖ ವೃತ್ತ, ರಸ್ತೆಗಳು, ದೇವಸ್ಥಾನಗಳು, ಮನೆಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಪ್ರಮುಖ ಸ್ಥಳ, ದೇಗುಲ ಹಾಗೂ ವಿವಿಧ ವಾರ್ಡ್‌ಗಳಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದರು. ಗಣೇಶ ಚತುರ್ಥಿ ಹಿನ್ನೆಲೆ ಶನಿವಾರ ನಗರದ ಗಣಪತಿ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿ ವಿನಾಯಕನಿಗೆ ಮಹಾಸಂಕಲ್ಪ ಪೂಜೆ, ಗಂಗಾಪೂಜೆ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾರುದ್ರಾಭಿಷೇಕ, ರಜತ ಕವಚಾಲಂಕಾರ, ವಿಶೇಷ ಹೂವಿನ ಅಲಂಕಾರ, ಮಹಾನೈವೇದ್ಯ, ಮಹಾಮಂಗಳಾರತಿ, ಸಹಸ್ರ ಬಿಲ್ವ ಪೂಜೆ, ಕುಂಕುಮ ಅರ್ಚನೆ ಮುಂತಾದ ಸೇವೆಗಳನ್ನು ನೆರವೇರಿಸಲಾಯಿತು.
ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನ, ಕೆ.ಆರ್.ಠಾಣೆ ಬಳಿಯ ಗಣಪತಿ ದೇವಸ್ಥಾನ, ಖಾಸಗಿ ಬಸ್ ನಿಲ್ದಾಣ ಬಳಿಯ ಪಂಚಮುಖಿ ದೇವಸ್ಥಾನ, ಟಿ.ಕೆ.ಬಡಾವಣೆ, ಸಿದ್ದಾರ್ಥನಗರ, ಪಡುವಾರಹಳ್ಳಿ, ಬೋಗಾದಿ 2ನೇ ಹಂತ, ರಾಮಕೃಷ್ಣ ನಗರ, ಶಾರದಾದೇವಿ ನಗರ ಮತ್ತು ವಿವೇಕಾನಂದ ವೃತ್ತದ ಗಣಪತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು. ಅರಮನೆ ಉತ್ತರ ಬಾಗಿಲಿನ ವಿನಾಯಕ ದೇವಸ್ಥಾನ ಸೇರಿದಂತೆ ಮುಜರಾಯಿ ದೇವಸ್ಥಾನಗಳಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು.
ಪರಿಸರ ಸ್ನೇಹಿ ಮೂರ್ತಿಗಳಿಗೆ ಒತ್ತು:
ಈ ಬಾರಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳು ಮಾರುಕಟ್ಟೆಯಲ್ಲಿ ಲಭ್ಯ ಇದ್ದುದ್ದರಿಂದ ಜಿಲ್ಲೆಯಲ್ಲಿ ಪರಿಸರ ಸ್ನೇಹಿಯಾಗಿ ಗಣೇಶೋತ್ಸವ ಆಚರಿಸಲಾಯಿತು. ಜತೆಗೆ ಹಲವು ಮನೆಗಳಲ್ಲಿ ಅವರೇ ಮೂರ್ತಿಗಳನ್ನು ತಯಾರಿಸಿದ್ದರು. ಆದರೂ, ಇದರಿಂದ ಪಿಒಪಿ ಮೂರ್ತಿಗಳಿಗೆ ಕಡಿವಾಣ ಹಾಕಲು ಸಾಧ್ಯವಾಗದೆ ಹಲವು ಕಡೆಗಳಲ್ಲಿ ಎತ್ತರದ ಗಣೇಶ ಮೂರ್ತಿಗಳನ್ನು ಸ್ಥಾಪಿಸಿರುವುದು ಕಂಡು ಬಂತು.
ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಮೊದಲ ದಿನವೇ ಕೆಲವರು ಗಣೇಶನನ್ನು ಕೆರೆ, ಕಾಲುವೆಗಳಲ್ಲಿ ವಿಸರ್ಜನೆ ಮಾಡಿದರು. ಮೂರ್ತಿ ವಿಸರ್ಜನೆಗಾಗಿ ನಗರಪಾಲಿಕೆ ಹಾಗೂ ಪರಿಸರ ಮತ್ತು ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವಿಶೇಷ ವಾಹನ ವ್ಯವಸ್ಥೆ ಮಾಡಲಾಗಿತ್ತು. ನಿಗದಿತ ಸ್ಥಳದಲ್ಲಿ ಮೂರ್ತಿ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿತ್ತು.
ಗಮನ ಸೆಳೆದ ಗಣೇಶ ಮೂರ್ತಿಗಳು:
ಈ ಬಾರಿ ಕಲಾವಿದ ರೇವಣ್ಣ ಕೈಚಳಕದಲ್ಲಿ ಮೂಡಿಬಂದ ವಿಭಿನ್ನ ಗಣೇಶ ಮೂರ್ತಿಗಳು ನೋಡುಗರನ್ನು ಆಕರ್ಷಿಸಿತು. ಗಣಪತಿ ಪಕ್ಕದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಂಸದ ಯದುವೀರ್, ಅಯೋಧ್ಯಾ ರಾಮಲಲ್ಲಾ ವಿಗ್ರಹದ ಜತೆಗೆ ಗಣೇಶ್, ಮೇಘಾಲಯದ ರಾಜ್ಯಪಾಲ ಕನ್ನಡಿಗ ಸಿ.ಎಚ್. ವಿಜಯಶಂಕರ್, ನಟ ರಿಷಬ್ ಶೆಟ್ಟಿ, ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವು ಮೂರ್ತಿ ಗಮನಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net