

ಸಾಗರ: ನಮ್ಮ ಕಲೆಯ ಮೂಲಮಟ್ಟವನ್ನು ಉಳಿಸಿಕೊಂಡು ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳಬೇಕು. ಆಗ ಮಾತ್ರ ಕಲೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಪತ್ರಕರ್ತ ರಾಜೇಶ್ ಭಡ್ತಿ ಹೇಳಿದರು.
ಶ್ರೀ ರಾಜರಾಜೇಶ್ವರಿ ಕೃಪಾಪೋಷಿತ ವಂಶವಾಹಿನಿ ಯಕ್ಷಮೇಳ ಗುಂಡೂಮನೆ ಅವರಿಂದ ಶ್ರೀನಗರದಲ್ಲಿರುವ ನೃತ್ಯ ಭಾಸ್ಕರ ಸಭಾಂಗಣದಲ್ಲಿ ಸಂಯೋಜಿಸಿರುವ ಏಕಾದಶಿ ಚಾತುರ್ಮಾಸ್ಯ ಪಾಕ್ಷಿಕ ತಾಳಮದ್ದಲೆ- ದರ್ಶನ 5ನೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಅಭಿರುಚಿ ಹಾಳಾಗಿರುವುದಕ್ಕೆ, ಕಲೆ ಹಾಳಾಗಿದೆ ಎನ್ನುವ ಪರಿಭಾಷೆ ಸರಿಯಲ್ಲ. ಮಾರ್ಪಾಡಗಳು ಆಯಾ ಕಾಲಕ್ಕೆ ಸಹಜ. ಆದರೆ ಸದಭಿರುಚಿಯ ಕಲೆ ಉಳಿಸುವಲ್ಲಿ ನಾವೂ ಕೂಡ ಸದಭಿರುಚಿಯ ಪ್ರೇಕ್ಷಕರಾಗಬೇಕು, ಸಂಘಟಕರಾಗಬೇಕು ಮತ್ತು ಕಲಾವಿದರಾಗಬೇಕು ಎಂದರು.
ಕನ್ನಡ ಭಾಷಾ ಜ್ಞಾನದ ವಿಸ್ತಾರಕ್ಕೆ ತಾಳಮದ್ದಲೆ ಪೂರಕ ಎನ್ನುವ ಸತ್ಯವನ್ನು ನಂಬಲೇಬೇಕು. ಕನ್ನಡ ಭಾಷೆಯ ಉಳಿವಿಗೆ ಯಕ್ಷಗಾನ ಕಲೆ ಮೂಲ ಎನ್ನುವುದು ಕ್ಲಿಷೆಯಾದರೂ ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಯಕ್ಷಕಲೆಯನ್ನು ಉಳಿಸಿಕೊಳ್ಳುವಲ್ಲಿ ಮಲೆನಾಡು ಮತ್ತು ಕರಾವಳಿಯ ಪಾತ್ರ ದೊಡ್ಡದು ಎಂದು ಹೇಳಿದರು.
ರಮೇಶ್ ಹೆಗಡೆ ಗುಂಡೂಮನೆ ರಚಿಸಿರುವ ಪಂಚಮುಖಿ ದರ್ಶನ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಸೂರ್ಯನಾರಾಯಣ ಹೆಗಡೆ, ಸೃಜನ್ ಗಣೇಶ್ ಹೆಗಡೆ, ಮಂಜುನಾಥ್ ಗುಡ್ಡೆದಿಂಬ, ಶ್ರೀವತ್ಸ, ಅರ್ಥಧಾರಿಗಳಾಗಿ ಅರುಣ್ ಬೆಂಕಟವಳ್ಳಿ, ರವಿಶಂಕರ್ ಭಟ್ ಇದ್ದರು. ಸಾಮಾಜಿಕ ಕಾರ್ಯಕರ್ತೆ ಜ್ಯೋತಿ ಮಣೂರು, ಸರ್ಕಾರಿ ಉರ್ದು ಪ್ರೌಢಶಾಲೆ ಮುಖ್ಯಶಿಕ್ಷಕ ದತ್ತಾತ್ರೆಯ ಭಟ್, ಅಶೋಕ ಕುಮಾರ್ ಹೆಗಡೆ ಇತರರಿದ್ದರು.