ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ

ganesha
Published on

ಮಾಗಡಿಯಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೆ - ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷಗಳಿಂದ ಕುತಂತ್ರ ಆರೋಪ

ಮಾಗಡಿ: ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಉತ್ತಮವಾಗಿ ಅಧಿಕಾರ ನಡೆಸುತ್ತಿದ್ದು, ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಪಟ್ಟಣದ ಕೆಂಪೇಗೌಡ ಸಮೃದ್ಧಿ ಬಡಾವಣೆಯಲ್ಲಿ ಶ್ರೀ ಕೆಂಪೇಗೌಡ ಸಮೃದ್ಧಿ ವಿನಾಯಕ ಬಳಗದಿಂದ ಭಾನುವಾರ ಏರ್ಪಡಿಸಿದ್ದ ವಿನಾಯಕ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಸಿದ್ದರಾಮಯ್ಯ ಅವರ ನಂತರ ಸಿಎಂ ಕುರ್ಚಿ ಬದಲಾವಣೆ ಚರ್ಚೆ ಆಗಬೇಕು. ಈಗ ಆ ಚರ್ಚೆ ಅಪ್ರಸ್ತುತ ಎಂದರು.


ಅಭಿವೃದ್ಧಿ ವಿಚಾರವಾಗಿ ದೆಹಲಿಗೆ ಹೋಗಿದ್ದು, ಮುಖ್ಯಮಂತ್ರಿ ವಿಚಾರವಾಗಿ ಮಾತನಾಡಲು ಅಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರೇ ಸ್ವಷ್ಟಪಡಿಸಿದ್ದಾರೆ. ಸಿಎಂ, ಡಿಸಿಎಂ ಆಗಬೇಕಾದರೆ ಹೈಕಮಾಂಡ್, ಶಾಸಕರು ತೀರ್ಮಾನಿಸುತ್ತಾರೆ. ಈ ವಿಚಾರವಾಗಿ ಯಾರು ಯಾರಿಗೆ ಬೇಕಾದರೂ ಮನವಿ ಸಲ್ಲಿಸಬಹುದು. ಇವೆಲ್ಲ ಮಾಧ್ಯಮಗಳ ಸೃಷ್ಟಿ ಎಂದರು.
ಏನು ತೀರ್ಪುಬರಲಿದೆ ನೋಡೋಣ: ಪಾಸಿಕ್ಯೂಷನ್ ಚರ್ಚೆ ಹಂತದಲ್ಲಿದ್ದು, ಸಿಎಂ ಪರ ವಕೀಲರು ವಾದ ಮಂಡಿಸಲು ಸೆ.12ರಂದು ಅವಕಾಶ ಕೇಳಿದ್ದಾರೆ. ಏನೇ ತೀರ್ಪು ಬಂದರೂ ಇನ್ನೂ 8 ರಿಂದ 10 ತಿಂಗಳು ಏನು ಆಗುವುದಿಲ್ಲ. ಏನು ತೀರ್ಪುಬರಲಿದೆ ನೋಡೋಣ ಎಂದು ಬಾಲಕೃಷ್ಣ ಹೇಳಿದರು.


ಪ್ರತಿ ಪಕ್ಷಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೇರೆ ಯಾವುದರಲ್ಲೂ ಹಣಿಯಲು ಸಾಧ್ಯವಾಗಲಿಲ್ಲ. ಮುಡಾ ವಿಚಾರದಲ್ಲಿ ಅವರ ಪಾತ್ರ ಇಲ್ಲ. ಆದರೂ ಉದ್ದೇಶ ಪೂರಕವಾಗಿ ಸಿಎಂ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಬಿಟ್ಟರೆ ನಮಗ್ಯಾರಿಗೂ ಉಳಿಗಾಲ ವಿಲ್ಲ ಎಂದು ಕೆಲ ವಿರೋಧಿಗಳು ಬೇರೆ ಬೇರೆ ರೀತಿ ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ಅವರು ಸಫಲರಾಗುವುದಿಲ್ಲ ಎಂದರು.
ಎತ್ತಿನಹೊಳೆ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಸಿಎಂ ಶಂಕುಸ್ಥಾಪನೆ ಮಾಡಿದ್ದರು. ಈಗ ಮೊದಲನೆ ಹಂತದ ಯೋಜನೆಗೆ ಸಿಎಂ, ಡಿಸಿಎಂ ಉದ್ಘಾಟಿಸಿದ್ದಾರೆ. ವಾಣಿವಿಲಾಸ್ ಸಾಗರದವರೆಗೆ 5 ಟಿಎಂಸಿ ನೀರು ಹರಿದುಬರಲಿದೆ. ಮುಂದಿನ ದಿನಗಳಲ್ಲಿ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೂ ನೀರು ಕೊಡಲು ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.


ಬಹುಮಾನ: ವಾರ್ಷಿಕೋತ್ಸವ ಪ್ರಯುಕ್ತ ರಂಗೋಲಿ ಸ್ಪರ್ಧೆ, ಮಕ್ಕಳ ಓಟ, ಸೈಕಲ್ ಸ್ಪರ್ಧೆ ಏರ್ಪಡಿಸಲಾಗಿತ್ತು.
ರಂಗೋಲೆ ಸ್ಪರ್ಧೆಯಲ್ಲಿ ಸವಿತಾ ಭಾಯಿ ಪ್ರಥಮ, ಹರಿಪ್ರಿಯಾ ದ್ವಿತೀಯ, ಪುನೀತ್ ಅವರಿಗೆ ತೃತೀಯ ಬಹುಮಾನ ನೀಡಲಾಯಿತು.
ಪ್ರಮುಖರಾದ ಶಿವಕುಮಾರ್ ನಾಯ್ಕ, ಯೋಗಾನಂದ್, ಶಿಕ್ಷಕ ನಾಗರಾಜು, ಸತೀಶ್, ಲಿಂಗಪ್ರಕಾಶ್, ಸುನೀಲ್, ಜಯರಾಮು ಇತರರು ಇದ್ದರು.

ನಮ್ಮನ್ನು ಮಧ್ಯೆ ತರಬೇಡಿ
ಎತ್ತಿನಹೊಳೆ ಯೋಜನೆ ಅನುಷ್ಠಾನವಾದರೆ ತಲೆ ಬೋಳಿಸಿಕೊಳ್ಳುತ್ತೇನೆಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಪ್ರತಿಕ್ರಿಯಿಸಿದ ಶಾಸಕರು, ಎತ್ತಿನಹೊಳೆ ಮೊದಲ ಹಂತಕ್ಕೆ ಚಾಲನೆ ದೊರಕಿದ್ದು, ತಲೆ ಬೋಳಿಸಿಕೊಳ್ಳಿ ಎಂದು ಮಾಧ್ಯಮದವರು, ಸಾರ್ವಜನಿಕರು ಕೇಳಬೇಕು, ಈ ವಿಚಾರವಾಗಿ ನನ್ನನ್ನು ಮಧ್ಯಕ್ಕೆ ಕರೆತರುವುದು ಏಕೆ ಎಂದು ಪ್ರಶ್ನಿಸಿದರು.

ತಮ್ಮೇನಹಳ್ಳಿ ಕೆರೆ ತುಂಬಿಸಲು ಪ್ರಸ್ತಾವನೆ
ಎತ್ತಿನಹೊಳೆಯಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಒಂದೂವರೆ ಟಿಎಂಸಿ, ಮಂಚನಬೆಲೆ ಜಲಾಶಯಕ್ಕೆ ಮುಕ್ಕಾಲು ಟಿಎಂಸಿ ನೀರು ತುಂಬಿಸಲಾಗುವುದು. ಇದರ ಜತೆ ತಮ್ಮೇನಹಳ್ಳಿ ಕೆರೆ ತುಂಬಿಸಲೂ ಪ್ರಸ್ತಾವನೆ ಸಲ್ಲಿಸಲಾಗುವುದು. ನಾವು ಡಿಪಿಆರ್, ಎಸ್ಟಿಮೆಂಟ್ ಮಾಡಿಸಿದ ವೇಳೆ ಎತ್ತಿನಹೊಳೆ ಯೋಜನೆ ಕುದೂರು ಭಾಗದಲ್ಲಿ ಹಾದುಹೋಗುತಿತ್ತು. ಇದರಿಂದ ಓಪನ್ ಕೆನಾಲ್ ಮೂಲಕ ವೈಜಿಗುಡ್ಡ ಜಲಾಶಯಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಪೈಪ್‌ಲೈನ್ ಮೂಲಕ ತೆಗೆದುಕೊಂಡು ಹೋಗಬೇಕೆಂದು ಬಿಜೆಪಿ ಅವಧಿಯಲ್ಲಿ ಬದಲಾವಣೆ ಮಾಡಿ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಮಾತ್ರ ಸೀಮಿತ ಮಾಡಲಾಗಿತ್ತು. ಈಗ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಪೈಪ್ ಮೂಲಕ ಮಂಚನಬೆಲೆಗೆ ನೀರು ತುಂಬಿಸಲು ಉಪಮುಖ್ಯಮಂತ್ರಿ ಬಳಿ ಮನವಿ ಮಾಡಿ ಸೇರಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net