

ಹುಬ್ಬಳ್ಳಿ: ಸರ್ಕಾರಿ ಸೇವೆಯನ್ನು ದೇಶದ ಸೇವೆಯೆಂದು ಭಾವಿಸಬೇಕು. ಬರೀ ನೌಕರರಾಗಿರದೇ ಕರ್ಮಯೋಗಿಗಳಾಗಿ ದುಡಿಯಬೇಕು. ಇದರಿಂದ ದೇಶದ ಭವಿಷ್ಯ ಉತ್ತುಂಗಕ್ಕೇರಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಲಹೆ ನೀಡಿದರು.
ಆದಾಯ ತೆರಿಗೆ ಇಲಾಖೆ, ರೈಲ್ವೆ ಹಾಗೂ ಅಂಚೆ ಇಲಾಖೆ ಸೇರಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್ ಆವರಣದ ಬಯೋಟೆಕ್ನಾಲಜಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸರ್ಕಾರಿ ಉದ್ಯೋಗಗಳಲ್ಲಿ ಹೊಸದಾಗಿ ನೇಮಕಗೊಂಡವರಿಗೆ ನೇಮಕಾತಿ ಪತ್ರಗಳ ವಿತರಣೆಯ 7ನೇ ರೋಜಗಾರ್ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲರೂ ಒಟ್ಟಿಗೆ ಕೆಲಸ ಮಾಡಬೇಕು. ಅಭಿವೃದ್ಧಿಯ ಕಾರ್ಯಗಳಿಗೆ ಕೈ ಜೋಡಿಸಬೇಕು. ಭಾರತ ಇಂದು ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ದೇಶದ 140 ಕೋಟಿ ಜನರಿಗೆ ಆಹಾರ ಪೂರೈಕೆ ಮಾಡುತ್ತಿರುವ ರೈತರ ಬಗ್ಗೆ ಹೆಮ್ಮೆಯಿದೆ. ಹಣ್ಣು, ತರಕಾರಿ, ಆಹಾರ ಪದಾರ್ಥಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ನಮ್ಮ ದೇಶದ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕಿದೆ. ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಭಾರತ ಪ್ರಪಂಚದಲ್ಲಿ 2ನೇ ಸ್ಥಾನದಲ್ಲಿದ್ದು, ಆಟೋ ಮೊಬೈಲ್ ಕ್ಷೇತ್ರದಲ್ಲಿ 3ನೇ ಸ್ಥಾನವನ್ನು ಹೊಂದಿದೆ. ಮೇಕ್ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಮೂಲಕ ಸ್ವದೇಶಿ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ದೊರೆತಿದೆ. ಖಾದ್ಯ ತೈಲ, ಮಿಲಿಟರಿ ಸಾಮಗ್ರಿ, ರಸಗೊಬ್ಬರ, ಪೆಟ್ರೋಲಿಯಂ ಸೇರಿ ಹಲವು ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಬೇಕಿದೆ ಎಂದರು.
ಆದಾಯ ತೆರಿಗೆ, ರೈಲ್ವೆ, ಅಂಚೆ, ಭಾರತೀಯ ಜೀವವಿಮಾ ನಿಗಮ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಐಐಟಿ ಸೇರಿ ವಿವಿಧ ಇಲಾಖೆಗಳಲ್ಲಿ ಹೊಸದಾಗಿ ನೇಮಕಾತಿ ಹೊಂದಿದ 148 ಅಭ್ಯರ್ಥಿಗಳಿಗೆ ಸಾಂಕೇತಿಕವಾಗಿ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.
ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತ ಮನೋಜ ಜೋಶಿ, ಪ್ರಧಾನ ಆಯುಕ್ತೆ ಶ್ಯಾಮಾ ಬನಸಿಯಾ, ಆಯುಕ್ತರಾದ ಅಸಿತ ಸಿಂಗ್, ಎಂ.ಕೆ. ಬಿಜು, ಕೇಶವ ದೀಕ್ಷಿತ್ ಇತರರು ಇದ್ದರು.