

ಶೃಂಗೇರಿ: ಸ್ವಸಹಾಯ ಸಂಘದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಗೃಹೋಪಯೋಗಿ ವಸ್ತುಗಳ ಉದ್ಯಮ ಉತ್ತಮ ಎಂದು ಚಿಕ್ಕಮಗಳೂರಿನ ಸಂಪನ್ಮೂಲ ವ್ಯಕ್ತಿ ರವಿಚಂದ್ರ ತಿಳಿಸಿದರು.
ಜಿಲ್ಲಾ ಗ್ರಾಮೀಣ ಉದ್ಯೋಗ ತರಬೇತಿ ಸಂಸ್ಥೆ, ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಮತ್ತು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ಬೇಗಾರು ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರು ಕ್ರಿಯಾಶೀಲತೆ ಬಳಸಿಕೊಂಡು ಗೃಹೋಪಯೋಗಿ ವಸ್ತುಗಳಾದ ಸೋಪ್ ಆಯಿಲ್, ಪಿನಾಯಿಲ್, ಟಾಯ್ಲೆಟ್ಲ್ ಕ್ಲೀನರ್ ಇತ್ಯಾದಿ ಉತ್ಪನ್ನಗಳನ್ನು ತಯಾರಿಸಬಹುದು. ಅದರ ತಯಾರಿಕೆಯಲ್ಲಿ ವಹಿಸಬೇಕಾದ ಸೂಕ್ಷ್ಮ ವಿಚಾರಗಳ ಕುರಿತು ಆರು ದಿನಗಳ ಕಾಲ ತರಬೇತಿ ನೀಡುವುದರ ಜತೆಗೆ ಉತ್ಪನ್ನಗಳ ಮಾರುಕಟ್ಟೆ ಕುರಿತು ಮಾಹಿತಿ ನೀಡಲಾಗುವುದು ಎಂದರು.
ತರಬೇತಿಯಲ್ಲಿ ವಾಣಿ, ಸುಪ್ರೀತಾ, ರೇಖಾ, ಜ್ಯೋತಿ, ಶಶಿಕಲಾ, ಶ್ವೇತಾ ಕಾಮತ್ ಸೇರಿದಂತೆ 30ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.