ಸ್ಮಶಾನ ನಿರ್ವಾಹಕರೆಂದು ನೇಮಕ ಮಾಡಿಕೊಳ್ಳಿ

hbhalli Prots
ಹಗರಿಬೊಮ್ಮನಹಳ್ಳಿಯ ತಾಪಂ ಕಚೇರಿ ಬಳಿ ಮಸಣ ಕಾರ್ಮಿಕರ ಸಂಘಟನೆ ಧರಣಿ ನಡೆಸಿತು. ಸಂಘದ ಸಂಚಾಲಕಿ ಬಿ.ಮಾಳಮ್ಮ, ತಾಲೂಕು ಸಂಚಾಲಕ ಹುಲುಗಪ್ಪ, ದೇವದಾಸಿ ಮಹಿಳಾ ವಿಮೋಚನಾ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಚಾಂದ್‌ಬೀ, ಮಸಣ ಕಾರ್ಮಿಕರಾದ ಬಿ.ಮಹೇಂದ್ರ, ಗವಿಸಿದ್ದಪ್ಪ, ಹುಡುಚಪ್ಪ, ಲಕ್ಷ್ಮಣ, ಮಂಜುನಾಥ ಇದ್ದರು.
Published on

ಹಗರಿಬೊಮ್ಮನಹಳ್ಳಿ: ರುದ್ರಭೂಮಿ ನಿರ್ವಾಹಕರನ್ನಾಗಿ ನೇಮಿಸಿಕೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ಮಸಣ ಕಾರ್ಮಿಕರ ಸಂಘದ ತಾಲೂಕು ಘಟಕ ಪಟ್ಟಣದ ತಾಪಂ ಕಚೇರಿ ಮುಂದೆ ಶನಿವಾರ ಧರಣಿ ನಡೆಸಿತು.

ಸಂಘದ ರಾಜ್ಯ ಸಂಚಾಲಕಿ ಬಿ.ಮಾಳಮ್ಮ ಮಾತನಾಡಿ, ಮಸಣ ಕಾರ್ಮಿಕರು ಹಲವು ವರ್ಷಗಳಿಂದ ಬಿಟ್ಟಿ ಕೆಲಸ ಮಾಡುತ್ತಿದ್ದು, ಅನ್ಯಾಯ ಸರಿಪಡಿಸಿ ನ್ಯಾಯ ಒದಗಿಸುವಂತೆ ಸರ್ಕಾರಗಳಿಗೆ ಮನವಿ ಸಲ್ಲಿಸಿದ್ದೇವೆ. ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ಸ್ಪಂದಿಸುತ್ತಿಲ್ಲ. ಈಗಲಾದರೂ ಮಸಣ ಕಾರ್ಮಿಕರ ಹಕ್ಕೊತ್ತಾಯಗಳನ್ನು ಸರ್ಕಾರ ಪರಿಗಣಿಸಬೇಕು.

ಪ್ರತಿ ಸಾರ್ವಜನಿಕ ಸ್ಮಶಾನಕ್ಕೆ ಒಬ್ಬರಂತೆ ಸ್ಥಳೀಯ ಸಂಸ್ಥೆಗಳು ಮಸಣ ನಿರ್ವಾಹಕರೆಂದು ನೇಮಿಸಿಕೊಳ್ಳಬೇಕು. ಕನಿಷ್ಠ 3 ಸಾವಿರ ರೂ. ಕೂಲಿ ಪಾವತಿಸುವಂತೆ ಕ್ರಮ ವಹಿಸಬೇಕು. ಅಗತ್ಯ ಪರಿಕರಗಳನ್ನು ಒದಗಿಸಬೇಕು. 65 ವರ್ಷ ಮೇಲ್ಪಟ್ಟ ಮಸಣ ಕಾರ್ಮಿಕರಿಗೆ ಮಾಸಿಕ ಸಹಾಯಧನ ಅಥವಾ ಪಿಂಚಣಿಯಾಗಿ ಕನಿಷ್ಠ 3 ಸಾವಿರ ರೂ. ಘೋಷಿಸಬೇಕು.

ಸ್ಥಳೀಯ ಸಂಸ್ಥೆಗಳನ್ನು ಮಾಲೀಕರನ್ನಾಗಿಸಿ ಮಸಣ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆ ಜಾರಿಗೊಳಿಸಬೇಕು. ಮಸಣ ಕಾರ್ಮಿಕರಿಗೆ ತಲಾ 5 ಎಕರೆ ಜಮೀನು ಉಚಿತವಾಗಿ ನೀಡಬೇಕು. ಹಿತ್ತಲು ಹಾಗೂ ನಿವೇಶನ ಸಹಿತ 10 ಲಕ್ಷ ಮೌಲ್ಯದ ಮನೆಯನ್ನು ಉಚಿತವಾಗಿ ಒದಗಿಸಬೇಕು ಎಂದು ಒತ್ತಾಯಿಸಿದರು.

ಸಂಘದ ತಾಲೂಕು ಸಂಚಾಲಕ ಹುಲುಗಪ್ಪ, ದೇವದಾಸಿ ಮಹಿಳಾ ವಿಮೋಚನಾ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಚಾಂದ್‌ಬೀ, ಮಸಣ ಕಾರ್ಮಿಕರಾದ ಬಿ.ಮಹೇಂದ್ರ, ಗವಿಸಿದ್ದಪ್ಪ, ಹುಡುಚಪ್ಪ, ಲಕ್ಷ್ಮಣ, ಮಂಜುನಾಥ, ಕೆಂಚಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net