

ಬೆಳಗಾವಿ: ಲಾಕ್‌ಡೌನ್ ಸಡಿಲಿಕೆ ಮಾಡಿದ್ದರಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲೂ ಜನ ಸಂಚಾರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಬುಧವಾರ ನಗರದ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ರವಿವಾರ ಪೇಟೆ, ಗಣೇಶ ಪೇಟೆ, ಶನಿವಾರ ಕೂಟ ಸೇರಿ ಇತರೆಡೆ ತೆರಳಿ ಸರ್ಕಾರದ ಮಾರ್ಗಸೂಚಿಯನ್ವಯ ದೈಹಿಕ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸುವಂತೆ ವ್ಯಾಪಾರಸ್ಥರಿಗೆ ಸೂಚಿಸಿದರು.
ಲಾಕ್‌ಡೌನ್‌ನಿಂದ ವ್ಯಾಪಾರಿಗಳಿಗೆ ಸಮಸ್ಯೆಯಾಗಿದೆ. ಸರ್ಕಾರ ತಮ್ಮ ಸಮಸ್ಯೆ ನಿವಾರಣೆಗೆ ಬದ್ಧವಾಗಿದೆ. ಕರೊನಾ ಪ್ರಕರಣಗಳು ಸಂಪೂರ್ಣ ಹತೋಟಿಗೆ ಬಂದ ಬಳಿಕ ವ್ಯಾಪಾರ, ವಹಿವಾಟಿಗೆ ಅನುಮತಿ ದೊರೆಯುತ್ತದೆ. ಅಲ್ಲಿಯವರೆಗೆ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಸಚಿವ ಅಂಗಡಿ ಮನವಿ ಮಾಡಿದರು. ಶಾಸಕ ಅನಿಲ ಬೆನಕೆ ಇತರರು ಇದ್ದರು.