ರೈಟ್ ಪಾರ್ಕಿಂಗ್‌ಗೆ ಜನರ ನಿರಾಸಕ್ತಿ; ಪಾಲನೆಯಾಗದ ನೋ ಪಾರ್ಕಿಂಗ್ ಆದೇಶ

No park
Published on

ಪ್ರಶಾಂತ ರಿಪ್ಪನ್​ಪೇಟೆ ಬೆಂಗಳೂರು: ಗಾಂಧಿನಗರದ ಸಂಚಾರ ಸಮಸ್ಯೆಗೆ ಕಾರಣವಾದ ರಸ್ತೆಬದಿಯ ವಾಹನ ನಿಲುಗಡೆಗೆ ಮುಕ್ತಿ ಹಾಡಬೇಕೆಂಬ ಬಿಬಿಎಂಪಿ ಉದ್ದೇಶ ಮತ್ತು ನಗರ ಪೊಲೀಸರ ನೋ ಪಾರ್ಕಿಂಗ್ ಆದೇಶಕ್ಕೆ ಬೆಂಗಳೂರಿಗರಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಪರಿಣಾಮವಾಗಿ ಬಿಬಿಎಂಪಿ ನಿರ್ಮಿಸಿರುವ ಮಹತ್ವಾಕಾಂಕ್ಷಿ ‘ರೈಟ್ ಪಾರ್ಕಿಂಗ್’ ಕೇಂದ್ರಕ್ಕೆ ಆರಂಭದಲ್ಲೇ ನಿರಾಸಕ್ತಿ ವ್ಯಕ್ತವಾಗಿದೆ.

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಿಬಿಎಂಪಿ ನಿರ್ಮಾಣ ಮಾಡಿರುವ ಪ್ರತಿಭಟನಾ ಸಭಾಂಗಣ ಕಟ್ಟಡದಲ್ಲಿ ದೇಶದಲ್ಲೇ ಮೊದಲ ಸ್ಮಾರ್ಟ್ ಪಾರ್ಕಿಂಗ್ ಕೇಂದ್ರವನ್ನು ನಿರ್ಮಾಣ ಮಾಡಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಇತ್ತೀಚೆಗಷ್ಟೆ ಉದ್ಘಾಟನೆಯಾಗಿದೆ. ಈ ಪಾರ್ಕಿಂಗ್ ಕೇಂದ್ರದ ಸದ್ಭಳಕೆಯನ್ನು ಮಾಡಿಕೊಳ್ಳುವಂತೆ ಬಿಬಿಎಪಿ ಸಾರ್ವಜನಿಕರಿಗೆ ಮನವಿ ಮಾಡುವುದರ ಜೊತೆಗೆ, ಗಾಂಧಿನಗರದ ಸುತ್ತಮುತ್ತಲಿನ ಒಟ್ಟು 39 ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ ಮಾಡಿ ಬೆಂಗಳೂರು ಪೊಲೀಸ್ ಆಯುಕ್ತರು ಆದೇಶವನ್ನು ಹೊರಡಿಸಿದ್ದಾರೆ. ಆದರೆ ಈ ಆದೇಶ ಪ್ರಾಯೋಗಿಕವಾಗಿ ಜಾರಿಯಾಗದಿರುವುದು ರೈಟ್ ಪಾರ್ಕಿಂಗ್ ಬದಲಿಗೆ ರಾಂಗ್ ಪಾರ್ಕಿಂಗ್‌ಗೆ ಕಾರಣವಾಗಿದೆ.

ಸ್ವಾತಂತ್ರ್ಯ ಉದ್ಯಾನವನದಲ್ಲಿ ನಿತ್ಯ ಒಂದಿಲ್ಲೊಂದು ಪ್ರತಿಭಟನೆ, ವಿಧಾನಸೌಧ, ಹೈಕೋರ್ಟ್, ಮೆಜೆಸ್ಟಿಕ್ ಹತ್ತಿರವಿರುವುದು ಹಾಗೂ ಗಾಂಧಿನಗರದ ಸುತ್ತಮುತ್ತ ವಾಣಿಜ್ಯೋದ್ಯಮಗಳು ಹೆಚ್ಚಾಗಿರುವುದರಿಂದ ಸಂಚಾರ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆ ಸಾಮಾನ್ಯ. ಇದನ್ನು ಮನಗಂಡೇ ಬಿಬಿಎಂಪಿ ಸ್ವಾತಂತ್ರ್ಯ ಉದ್ಯಾನವನದಲ್ಲಿ 79 ಕೋಟಿ ರೂ. ವೆಚ್ಚದಲ್ಲಿ ಪ್ರತಿಭಟನಾ ಸಭಾಂಗಣವನ್ನು ನಿರ್ಮಾಣ ಮಾಡಿ ಅಲ್ಲಿ ಬಹುಮಹಡಿ ವಾಹನ ನಿಲುಗಡೆ ಕೇಂದ್ರವನ್ನು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಿದೆ.

ಡಿಸಿಎಂ ಆದೇಶಕ್ಕೂ ಡೋಂಟ್ ಕೇರ್

ದೇಶದ ಪ್ರಥಮ ಸ್ಮಾರ್ಟ್ ಪಾರ್ಕಿಂಗ್ ಎಂಬ ಹೆಗ್ಗಳಿಕೆ ಹೊಂದಿರುವ ರೈಟ್ ಪಾರ್ಕಿಂಗ್ ಕೇಂದ್ರವು ಬ್ರ್ಯಾಂಡ್ ಬೆಂಗಳೂರು ಯೋಜನೆಯ ಮೊದಲನೇ ಕಾರ್ಯಕ್ರಮ ಎಂದು ಬಿಬಿಎಂಪಿ ಹೇಳಿಕೊಂಡಿತ್ತು. ಇದನ್ನು ಯಶಸ್ವಿ ಮಾಡಬೇಕೆಂಬ ಕಾರಣಕ್ಕೆ ಸುತ್ತಮುತ್ತಲಿನ 1 ಕಿ.ಮೀ.ವ್ಯಾಪ್ತಿಯಲ್ಲಿ ಪಾರ್ಕಿಂಗ್ ನಿಷೇಧಿಸುವುದಾಗಿ ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ್ ೋಷಣೆ ಮಾಡಿದ್ದರು. ಆದರೆ ಡಿಸಿಎಂ ಮೌಖಿಕ ಆದೇಶಕ್ಕಾಗಲಿ, ನಗರ ಪೊಲೀಸ್ ಆಯುಕ್ತರ ಲಿಖಿತ ಆದೇಶಕ್ಕಾಗಲಿ ಕವಡೆಕಾಸಿನ ಕಿಮ್ಮತ್ತು ದೊರೆಯುತ್ತಿಲ್ಲ.

ಪಾರ್ಕಿಂಗ್ ಕೇಂದ್ರದ ಪಕ್ಕದಲ್ಲಿ ಹಾದುಹೋಗುವ ಮುಖ್ಯರಸ್ತೆ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಈ ಹಿಂದಿನಂತೆಯೇ ಸಾರ್ವಜನಿಕರು ವಾಹನಗಳನ್ನು ನಿಲುಗಡೆ ಮಾಡುತ್ತಿರುವುದು ವಿಜಯವಾಣಿ ರಿಯಾಲಿಟಿ ಚೆಕ್ ವೇಳೆ ಕಂಡುಬಂದಿದೆ.

ಬಿಬಿಎಂಪಿ ಅಳವಡಿಸಿರುವ ನೋ ಪಾರ್ಕಿಂಗ್ ನಾಮಲಕವಿದ್ದರೂ ವಾಹನಗಳನ್ನು ನಿಲ್ಲಿಸಿರುವ ದೃಶ್ಯ ಸಾಮಾನ್ಯವಾಗಿದ್ದು, ಅಂತಹ ವಾಹನ ಮಾಲೀಕರ ವಿರುದ್ಧ ಕ್ರಮಕೈಗೊಂಡು ಕೇಸು ದಾಖಲಿಸಬೇಕಾದ ಪೊಲೀಸರು ಮಾತ್ರ ಮೌನವಹಿಸಿದ್ದಾರೆ.

ಹಣ ಪಾವತಿಸಿಸಲು ಸಾರ್ವಜನಿಕರ ಹಿಂದೇಟು

ಬಿಬಿಎಂಪಿ ಸ್ಥಾಪಿಸಿರುವ ವಾಹನ ನಿಲುಗಡೆಯಲ್ಲಿ ಹಣ ಪಾವತಿಸಿ ವಾಹನ ನಿಲ್ಲಿಸಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ. ರಸ್ತೆ ಬದಿಯಲ್ಲಾದರೆ ಉಚಿತವಾಗಿ ನಿಲ್ಲಿಸಬಹುದು ಎಂಬುದು ಅವರ ಲೆಕ್ಕಾಚಾರ. ಸುತ್ತಮುತ್ತ ಇರುವ ಹೋಟೆಲ್, ಮಾಲ್ ಮತ್ತಿತರ ವ್ಯಾಪಾರ ಕೇಂದ್ರಕ್ಕಾಗಿ ಬರುವ ವಾಹನಗಳು ಆಯಾ ಅಂಗಡಿಗಳ ಮುಂದೆಯೇ ವಾಹನ ನಿಲ್ಲಿಸುವ ಪದ್ಧತಿಯನ್ನು ಈಗಲೂ ಮುಂದುವರೆಸಿದ್ದಾರೆ.

ಬಿಬಿಎಂಪಿ ಸಾರ್ವಜನಿಕರಿಗೆ ಹೊರೆಯಾಗದಂತೆ ಪಾರ್ಕಿಂಗ್ ಶುಲ್ಕವನ್ನು ನಿರ್ಧರಿಸಿದ್ದು, ಕಾರುಗಳಿಗೆ ಮೊದಲ ಒಂದು ಗಂಟೆಗೆ 25 ರೂಪಾಯಿ, ನಂತರ 15 ರೂಪಾಯಿ ಹೆಚ್ಚಳದಂತೆ, 12 ಗಂಟೆಯ ನಂತರ ಪ್ರತಿ ಗಂಟೆಗೆ 12.50 ರೂಪಾಯಿ ನಿಗದಿ ಮಾಡಿದೆ. ದ್ವಿಚಕ್ರವಾಹನಗಳಿಗೆ ಮೊದಲ ಒಂದು ಗಂಟೆಗೆ 15 ರೂಪಾಯಿ, ನಂತರ 10 ರೂಪಾಯಿ ಹೆಚ್ಚಳದಂತೆ, 12 ಗಂಟೆಯ ನಂತರ ಪ್ರತಿ ಗಂಟೆಗೆ 7.50 ರೂಪಾಯಿ ನಿಗದಿ ಮಾಡಿದೆ. ಖಾಯಂ ಗ್ರಾಹಕರಿಗೆ ಕಡಿಮೆ ದರದಲ್ಲಿ ಮಾಸಿಕ ಪಾಸ್ ಸೌಲಭ್ಯವನ್ನು ಕಲ್ಪಿಸಿದೆ.

‘ಬಿಬಿಎಂಪಿ ಹೊಸದಾಗಿ ಸ್ಥಾಪಿಸಿರುವ ವಾಹನ ನಿಲುಗಡೆಯಲ್ಲಿ ಆಟೋ ನಿಲುಗಡೆಗೆ ಅವಕಾಶ ನೀಡಿಲ್ಲ. ಕಾರಿನ ದರವನ್ನೇ ಆಟೋಕ್ಕೆ ನಿಗದಿಗೊಳಿಸಿದ್ದು, ಆಟೋ ಚಾಲಕರಿಗೆ ಹೊರೆಯಾಗಿದೆ. ಪೊಲೀಸರು ರಸ್ತೆಯಲ್ಲಿ ಆಟೋ ನಿಲ್ಲಿಸಲು ಬಿಡುತ್ತಿಲ್ಲ. ಹೀಗಾದರೆ ಆಟೋ ಚಾಲಕರಿಗೆ ತೊಂದರೆಯಾಗುತ್ತದೆ’

-ಯಾಸಿನ್, ಆಟೋ ಚಾಲಕ

‘ಬಿಬಿಎಂಪಿ ಬಹಳ ನಿರೀಕ್ಷೆಯನ್ನಿಟ್ಟುಕೊಂಡು ಈ ಯೋಜನೆ ತಯಾರಿಸಿದೆ. ಟೆಂಡರ್‌ನಲ್ಲಿ ಈ ಜಾಗವನ್ನು ಪಡೆದಿರುವ ಪ್ರಿನ್ಸ್ ರಾಯಲ್ ಸಂಸ್ಥೆ ದೇಶದಲ್ಲೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಅತ್ಯುತ್ತಮ ಸೇವೆಯನ್ನು ಗ್ರಾಹಕರಿಗೆ ಒದಗಿಸಲು ಸಿದ್ಧವಾಗಿದೆ. ಇಲ್ಲಿ 600 ಕಾರು, 750 ಬೈಕ್ ನಿಲ್ಲಿಸಲು ಅವಕಾಶವಿದೆ. ಆದರೆ ದಿನಕ್ಕೆ ಕೇವಲ 50-60 ಕಾರುಗಳು ನಿಲುಗಡೆಯಾಗುತ್ತಿವೆ. ಹೀಗಾದರೆ ಇದನ್ನು ಹೇಗೆ ನಿರ್ವಹಣೆ ಮಾಡಲು ಸಾಧ್ಯ ? ಈ ಯೋಜನೆಯನ್ನು ಸಾರ್ವಜನಿಕರು ಉಪಯೋಗಿಸಬೇಕೇಂದರೆ ಪೊಲೀಸ್ ಆಯುಕ್ತರು ಹೊರಡಿಸಿರುವ ‘ನೋ ಪಾರ್ಕಿಂಗ್ ರೆನ್’ ಆದೇಶ ಅನುಷ್ಠಾನಗೊಳ್ಳಬೇಕು.

-ಕುಮಾರ್, ರೈಟ್ ಪಾರ್ಕಿಂಗ್ ಎಂಡಿ

" ಪೊಲೀಸ್ ಆಯುಕ್ತರು ಗಾಂಧಿನಗರದ ಕೆಲ ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ ಮಾಡಿ ಆದೇಶ ಹೊರಡಿಸಿದ್ದಾರೆ. ಆದರೆ ಬಿಬಿಎಂಪಿಯ ಹಳೇ ಪಾರ್ಕಿಂಗ್ ನಾಮಲಕಗಳು ಇನ್ನೂ ತೆರವುಗೊಂಡಿಲ್ಲ. ಮತ್ತು ಹೊಸ ನೋ ಪಾರ್ಕಿಂಗ್ ನಾಮಲಕ ಅಳವಡಿಸಿಲ್ಲ. ಇದರಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಲ್ಲ. ಸ್ವಲ್ಪದಿನದಲ್ಲಿ ಪೂರ್ಣ ಪ್ರಮಾಣದಲ್ಲಿ ನೋ ಪಾರ್ಕಿಂಗ್ ಅನುಷ್ಠಾನಕ್ಕೆ ಬರಲಿದೆ." - ಹೆಸರು ಹೇಳಲಿಚ್ಚಿಸದ ಪೊಲೀಸ್ ಮುಖ್ಯಪೇದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net