

ಹುಬ್ಬಳ್ಳಿ: ಕೇರಳ ಮೂಲದ ವೈದ್ಯರತ್ನಮ್ ಪಿ.ಎಸ್. ವಾರಿಯರ್ ಅವರ ಆರ್ಯ ವೈದ್ಯ ಶಾಲಾ ಶಾಖೆಯನ್ನು ಇಲ್ಲಿಯ ಬೈಲಪ್ಪನವರನಗರದಲ್ಲಿ ಆರಂಭಿಸಲಾಗುತ್ತಿದೆ ಎಂದು ಕೊಟ್ಟಕ್ಕಲ್ನ ಆರ್ಯ ವೈದ್ಯ ಶಾಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಜಿ.ಸಿ. ಗೋಪಾಲ ಪಿಳ್ಳೈ ಅವರು ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 15ರಂದು ಸಂಜೆ 5ಕ್ಕೆ ದೇಶಪಾಂಡೆನಗರದ ಗುಜರಾತ್ ಭವನದಲ್ಲಿ ಶಾಖೆಯ ಉದ್ಘಾಟನೆ ಸಮಾರಂಭ ನಡೆಯಲಿದೆ. ತೆಲಂಗಾಣ ಹೈಕೋರ್ಟ್ ನ್ಯಾಯಾಧೀಶ ಇ.ವಿ. ವೇಣುಗೋಪಾಲ, ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಧಾರವಾಡ ಹೈಕೋರ್ಟ್ ನ್ಯಾಯಾಧೀಶ ವೇದವ್ಯಾಸಾಚಾರ ಶ್ರೀಶಾನಂದ, ಮೇಯರ್ ವೀಣಾ ಬರದ್ವಾಡ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಉಪಸ್ಥಿತರಿರುವರು.
ಕೊಟ್ಟಕ್ಕಲ್ ಆಸ್ಪತ್ರೆಯು ಸುಸಜ್ಜಿತ ಆಯುರ್ವೇದ ಚಿಕಿತ್ಸೆ ನೀಡುವ ತಾಣವಾಗಿದೆ. ಇಲ್ಲಿ ಹಲವು ಸೇವಾ ಕಾರ್ಯಗಳು ನಡೆಯುತ್ತವೆ. ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಸಂಶೋಧನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಆದ್ಯತೆ ಕೊಡಲಾಗಿದೆ. ಗುಣಮಟ್ಟ, ಉತ್ತಮ ಔಷಧಗಳ ಉತ್ಪಾದನೆಗೆ ಹೆಸರು ಪಡೆದಿದೆ ಎಂದರು.
ಹುಬ್ಬಳ್ಳಿ ಶಾಖೆಯಲ್ಲಿಯೂ ಉಚಿತ ಸಂದರ್ಶನಕ್ಕೆ ಅವಕಾಶ ನೀಡಲಾಗಿದೆ. ರೋಗಿಗಳು ಇದರ ಪ್ರಯೋಜನೆ ಪಡೆಯಬಹುದು. ಹುಬ್ಬಳ್ಳಿ ಶಾಖೆಯು ಕರ್ನಾಟಕದ 4ನೇ ಹಾಗೂ ದೇಶದ 27ನೇ ಶಾಖೆಯಾಗಿ ಹೊರಹೊಮ್ಮಲಿದೆ ಎಂದು ಅವರು ಹೇಳಿದರು.
ಅಂದು ಮಧ್ಯಾಹ್ನ ಗುಜರಾತ್ ಭವನದಲ್ಲಿ ವಿದ್ಯಾಥಿರ್ಗಳು ಹಾಗೂ ವೈದ್ಯರಿಗೆ ಸೆಮಿನಾರ್ ಏರ್ಪಡಿಸಲಾಗಿದೆ. ಆಯುರ್ವೇದ ಕುರಿತು ವಿವಿಧ ತಜ್ಞರು ಮಾಹಿತಿ ನೀಡುವರು.