

ಹೂವಿನಹಿಪ್ಪರಗಿ: ಬರಗಾಲ ಘೋಷಣೆಗೆ ಸೀಮಿತವಾಗದೆ ಹಾಳಾದ ಬೆಳೆಗೆ ಪರಿಹಾರ ನೀಡಿ ದುಡಿಯುವ ಕೈಗಳಿಗೆ ಉದ್ಯೋಗ ಕೊಡಿ ಎಂದು ಅಖಂಡ ಕನಾಟಕ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.
ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿಯ ಪತ್ರಿವನ ಮಠದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಮಳೆ ಸಂಪೂರ್ಣ ವಿಲವಾದ ಕಾರಣ ಬಿತ್ತನೆ ಮಾಡಿದ ತೊಗರಿ, ಶೇಂಗಾ, ಮೆಕ್ಕೆಜೋಳ, ಈರುಳ್ಳಿ, ಕಬ್ಬು ಸೇರಿದಂತೆ ಇನ್ನಿತರ ಬೆಳೆಗಳು ನೀರಿಲ್ಲದೆ ಸಂಪೂರ್ಣ ನೆಲಕಚ್ಚಿವೆ. ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಬರಗಾಲ ಪೀಡಿತವೆಂದು ಘೋಷಣೆ ಮಾಡಲು ಅಖಂಡ ಕನಾಟಕ ರೈತ ಸಂಘ ಆಗ್ರಹಿಸಿ ಹಲವಾರು ಬಾರಿ ಹೋರಾಟ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ
ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ 12 ತಾಲೂಕುಗಳನ್ನು ಬರ ಪೀಡಿತವೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಆದರೆ ಜಿಲ್ಲೆಯ ತಿಕೋಟಾ ತಾಲೂಕನ್ನು ಬರಗಾಲ ಪಟ್ಟಿಯಿಂದ ಕೈಬಿಟ್ಟು ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ. ಆದ್ದರಿಂದ ಕೂಡಲೇ ತಿಕೋಟಾ ತಾಲೂಕನ್ನು ಸಹ ಬರಗಾಲ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಪ್ರತಿ ಎಕರೆಗೆ 25 ಸಾವಿರ ರೂ. ನಂತೆ ಪರಿಹಾರವಾಗಿ ರೈತರ ಖಾತೆಗೆ ಕೂಡಲೇ ಹಣ ಜಮಾ ಮಾಡಬೇಕು. ದುಡಿಯುವ ಕೈಗಳಿಗಾಗಿ ನರೇಗಾ ಯೋಜನೆಯನ್ನು ಸರಿಯಾಗಿ ಅನುಷ್ಠಾನಕ್ಕೆ ತರಬೇಕು. ರಾಜ್ಯದಾದ್ಯಂತ ಸಾಲಬಾಧೆಗೆ ಒಳಗಾದ ರೈತರ ಆತ್ಮಹತ್ಯೆ ತಡೆಯಲು ವಿಶೇಷ ಯೋಜನೆ ಜಾರಿಗೆ ತರಬೇಕು. ಸರ್ಕಾರ ರೂಪಿಸಿರುವ ರೈತಪರ ಯೋಜನೆಗಳು ಸರಿಯಾಗಿ ಅರ್ಹ ರೈತರಿಗೆ ತಲುಪುತ್ತಿಲ್ಲ ಎಂದು ದೂರಿದರು.
ರೈತ ಮುಖಂಡರಾದ ಹಣಮಂತರಾಯ ಗುಣಕಿ, ರಮೆಶ ಕೋರಿ, ಮಲ್ಲನಗೌಡ ನಾಡಗೌಡ, ಶಿವಣ್ಣ ವಡವಡಗಿ, ಮಲ್ಲು ಕೋಲಕಾರ, ವಿಠ್ಠಲ ಬಿರಾದಾರ, ಬಾಳಪ್ಪಗೌಡ ಲಿಂಗದಳ್ಳಿ ಇತರರಿದ್ದರು.