

ಮಂಡ್ಯ: ಗ್ರಾಮೀಣ ಭಾಗದಲ್ಲಿ ಜಾನಪದ ಉತ್ಸವ ಹೆಚ್ಚಾಗಿ ನಡೆಯಬೇಕು. ಆ ಮೂಲಕ ಅದನ್ನು ಪಸರಿಸುವ ಕೆಲಸ ಮಾಡಬೇಕು ಎಂದು ಎಸ್.ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಸಲಹೆ ನೀಡಿದರು.
ನಗರದ ಬಾಲಭವನದ ಆವರಣದಲ್ಲಿ ಅರುವಿ ಟ್ರಸ್ಟ್ ಹಾಗೂ ವೀನಸ್ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಅರುವಿ ಸಾಂಸ್ಕೃತಿಕ ಉತ್ಸವ-2023ದಲ್ಲಿ ಮಾತನಾಡಿದ ಅವರು, ಜಾನಪದ ಕಲೆ ಮತ್ತು ನಮ್ಮ ಸಾಂಸ್ಕೃತಿಕ ಕಲೆಗಳು ಸಂಸ್ಕೃತಿಯಾಗಿ ಹೊರಹೊಮ್ಮುತ್ತದೆ. ಹೂವು ಅಲ್ಲೇ ಇದ್ದುಕೊಂಡು ಸುವಾಸನೆಯನ್ನು ಕೊಡುವ ಹಾಗೆ ಜನಪದವೂ ಕೂಡ ಒಂದು ಕಡೆಯಿಂದಲೇ ಅದರ ಸೊಗಡನ್ನು ಬೀರುತ್ತಿದೆ. ಹೂವನ್ನು ಮಾಲೆಯಾಗಿ ಕಟ್ಟುವ ಮೂಲಕ ದೇವರಿಗೆ ಸಮರ್ಪಿಸಿದರೆ ಅದು ಸಂಸ್ಕೃತಿ ಆಗುತ್ತದೆ. ಅದೇ ರೀತಿಯಾಗಿ ಟ್ರಸ್ಟ್‌ನವರು ಪ್ರಕೃತಿದತ್ತವಾಗಿರುವ ಕಲೆಯ ಕಾರ್ಯಕ್ರಮಗಳನ್ನು ಆಚರಿಸಲು ಹೆಚ್ಚು ಒತ್ತು ನೀಡಿದ್ದಾರೆ ಎಂದು ಬಣ್ಣಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಆರೋಗ್ಯ ಇಲಾಖೆ ನಿವೃತ್ತ ಶಿಕ್ಷಣಾಧಿಕಾರಿ ಶಿವಾನಂದ, ಗ್ರಾಮೀಣ ಭಾಗದಲ್ಲಿ ನನ್ನ ಸೇವೆಯಲ್ಲಿ ಆರೋಗ್ಯ ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ನೀಡಿದ್ದೆ. ಜನರ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿದ್ದೆ. ಮೂಢನಂಬಿಕೆಗಳಿಂದ ದೂರುವಿರುವಂತೆಯು ಹಲವು ಕಾರ್ಯಕ್ರಮಗಳನ್ನು ಮಾಡಲಾಗಿತ್ತು. ಅದರಂತೆ ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷೆ ಅರುಣಾ ಈಶ್ವರ್, ವಿ.ಸಿ ಫಾರ್ಮ್ ಕೃಷಿ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ.ವೆಂಕಟೇಶ್, ಗಾಯಕ ಡಾ.ಎಂ.ಮಹದೇಶ್, ಲೋಕೇಶ್ ಹಾಲತಿ, ಎಚ್.ಪಿ.ವೈರಮುಡಿ, ಶೇಖರ್ ಹನಿಯಂಬಾಡಿ, ಸಂತೆಕಸಲಗೆರೆ ಬಸವರಾಜು ಇತರರಿದ್ದರು.