

ಮಡಿಕೇರಿ:
ಕದನ ಕಲೆಯಾದ ಕರಾಟೆ ಪ್ರತಿಯೊಬ್ಬ ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಈ ಕಾರಣದಿಂದ ಭಾರತದಲ್ಲಿ ವಿಶ್ವ ಕರಾಟೆ ಮಂಡಳಿಯಿಂದ ಮಾನ್ಯತೆ ಪಡೆದಿರುವ ಶಿಟೋ ರಿಯೋ ಶೈಲಿಯ ಕರಾಟೆಯನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಲು ವಿವಿಧ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅಖಿಲ ಭಾರತ ಶಿಟೋ ರಿಯೋ ಕರಾಟೆ ಡು ಯೂನಿಯನ್ ಅಧ್ಯಕ್ಷ ಚೆಪ್ಪುಡಿರ ಎಸ್. ಅರುಣ್ ಮಾಚಯ್ಯ ತಿಳಿಸಿದರು.
ತಮ್ಮ ಆಹ್ವಾನದ ಮೇರೆಗೆ ಭಾರತಕ್ಕೆ ಆಗಮಿಸಿದ ವಿಶ್ವ ಶಿಟೋ ರಿಯೋ ಕರಾಟೆ ಫೆಡರೇಶನ್ ಅಧ್ಯಕ್ಷ ಕೈಚೋ (ಪರಮೋಚ್ಚ ) ಜಪಾನ್ ದೇಶದ ಜೇನ್ ಜೋ ಇವಾಟ ಅವರ ಭೇಟಿಯ ಅಂಗವಾಗಿ ಬೆಂಗಳೂರು ಮತ್ತು ಚೆನ್ನೈನಲ್ಲಿ ನಡೆದ ಅಂತರಾಷ್ಟ್ರೀಯ ತಾಂತ್ರಿಕ ಕಾರ್ಯಾಗಾರದ ಆಶಯಗಳನ್ನು ತಿಳಿಸುವ ಅಂಗವಾಗಿ ಗುರುವಾರ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ ಅವರು, ಶಿಟೋ ರಿಯೋ ಶೈಲಿಯ ಉನ್ನತ ತಾಂತ್ರಿಕತೆಯ ಬಗ್ಗೆ ತಿಳಿದುಕೊಳ್ಳಲು ಈ ಕಾರ್ಯಗಾರ ಹೆಚ್ಚು ನೆರವಾಯಿತಲ್ಲದೆ, ಎರಡು ಮಹಾನಗರಗಳಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ದೇಶದ ವಿವಿದೆಡೆಗಳಿಂದ ಆಗಮಿಸಿದ್ದ ಒಟ್ಟು ೭೦೦ಕ್ಕೂ ಹೆಚ್ಚಿನ ಹಿರಿಯ ತರಬೇತಿದಾರರು ಭಾಗವಹಿಸಿದ್ದರು ಎಂದು ಅರುಣ್ ಮಾಚಯ್ಯ ಅವರು ವಿವರಿಸಿದರು.
ಇಂದಿನ ಕಾಲಘಟ್ಟದಲ್ಲಿ ಪ್ರತಿಯೊಬ್ಬರಿಗೂ ಆತ್ಮರಕ್ಷಣೆ ಬಹಳ ಮುಖ್ಯವಾಗಿದೆ. ಮನುಷ್ಯನ ಸ್ವರಕ್ಷಣೆಗಾಗಿಯೇ ಇರುವ ಕರಾಟೆ ತರಬೇತಿಯನ್ನು ಪ್ರತಿಯೊಬ್ಬರೂ ಪಡೆದುಕೊಂಡರೆ ಕೇವಲ ದೈಹಿಕ ಸಾಮರ್ಥ್ಯ ಮಾತ್ರವಲ್ಲದೆ ಪ್ರತಿಯೊಬ್ಬರಲ್ಲೂ ಮಾನಸಿಕ, ದೈಹಿಕ, ಬೌಧಿಕ ಅಲ್ಲದೇ ಸೃಜನಶೀಲತೆ ಮತ್ತು ವಿನಯ ಶೀಲತೆ ಮೂಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಹಿನ್ನೆಲೆಯಲ್ಲಿ ಶಿಟೋ ರಿಯೋ ಕರಾಟೆ ಶೈಲಿಯನ್ನು ಗ್ರಾಮೀಣ ಮಟ್ಟಕ್ಕೂ ಕೊಂಡೊಯ್ಯುವುದು ಇಂದಿನ ಅನಿವಾರ್ಯವಾಗಿದೆ. ಅಲ್ಲದೆ ಕರಾಟೆ ಕ್ರೀಡಾ ಕಲೆಯನ್ನು ಪ್ರತಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಹಂತಕ್ಕೂ ವಿಸ್ತರಿಸಲು ಮಹತ್ವದ ಯೋಜನೆ ರೂಪುಗೊಳ್ಳುತ್ತಿದೆ. ಇದಲ್ಲದೆ ಮಹಿಳೆಯರಿಗೆ ಸೇರಿದಂತೆ ಆಸಕ್ತರಿಗೆಲ್ಲರಿಗೂ ಶಿಟೋ ರಿಯೋ ಕರಾಟೆ ಶೈಲಿಯನ್ನು ಮುಕ್ತವಾಗಿಸುವ ಮಹೋನ್ನತ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದ ಅರುಣ್ ಮಾಚಯ್ಯ, ಮುಂದೊಂದು ದಿನ ಕರಾಟೆ ತರಬೇತಿ ಪ್ರತಿ ವ್ಯಕ್ತಿಗಳಿಗೂ ಕಡ್ಡಾಯವಾಗುವ ದಿನಗಳು ದೂರವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದಾರೆ.
ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ತಾಂತ್ರಿಕ ಕಾರ್ಯಗಾರದಲ್ಲಿ ಕಳೆದ ಸೆಪ್ಟಂಬರ್ ನಲ್ಲಿ ಲಂಡನಿನ ಬಮಿರ್ಂಗ್ಹ್ಯಾಮ್ ನಲ್ಲಿ ನಡೆದ ಕಾಮನ್ವೆಲ್ತ್ ಕರಾಟೆ ಕೂಟದಲ್ಲಿ ಪಾಲ್ಗೊಂಡು ಭಾರತ ತಂಡ ಎರಡು ಚಿನ್ನದ ಪದಕ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರ್ನಾಟಕದ ಎಂ.ಪಿ. ಜಾಗೃತ್ ಅವರನ್ನು ವಿಶ್ವ ಶಿಟೋ ರಿಯೋ ಕರಾಟೆ ಫೆಡರೇಶನ್ ಅಧ್ಯಕ್ಷರಾದ ಜೇನ್ ಜೋ ಇವಾಟ ಅವರು ಸನ್ಮಾನಿಸಿ ಗೌರವಿಸಿದರು ಎಂದು ಇದೇ ಸಂದರ್ಭದಲ್ಲಿ ಅರುಣ್ ಮಾಚಯ್ಯ ಅವರು ಮಾಹಿತಿ ನೀಡಿದ್ದಾರೆ.