

ಮಂಡ್ಯ: ಮ್ಯಾನ್ಯುವಲ್ ಸ್ಕ್ಯಾವೆಂಜರ್ ವೃತ್ತಿಯಲ್ಲಿ ತೊಡಗಿರುವ ಕುಟುಂಬಗಳ ಸದಸ್ಯರ ಸಂಖ್ಯೆಗೆ ಸಂಬಂಧಿಸಿದಂತೆ ಸಮೀಕ್ಷೆ ಸರಿಯಾಗಿ ಮಾಡಿಲ್ಲ. ಆದ್ದರಿಂದ ಸಮರ್ಪಕವಾದ ಮಾಹಿತಿಯೊಂದಿಗೆ ಸರ್ವೆ ನಡೆಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಅರುಂಧತಿಯಾರ್ ಪೌರಕಾರ್ಮಿಕ ಮಹಾಸಭಾ ಸಂಘಟನೆ ಕಾರ್ಯಕರ್ತರು ಸೋಮವಾರ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರಸಭೆ ಎದುರು ಜಮಾಯಿಸಿದ ಕಾರ್ಯಕರ್ತರು, ಬೇಡಿಕೆಗಳ ಕುರಿತಂತೆ ಘೋಷಣೆ ಕೂಗಿ ಸರ್ಕಾರಕ್ಕೆ ಒತ್ತಾಯಿಸಿದರು. ಪರಿಶಿಷ್ಟ ಹಾಗೂ ಆದಿ ದ್ರಾವಿಡ ಸಮುದಾಯ ಅರುಂಧತಿಯಾರ್ ಜಾತಿಗೆ ಸೇರಿದೆ. ಇವರು ಮ್ಯಾನ್ಯುವಲ್ ಸ್ಕ್ಯಾವೆಂಜರ್ ವೃತ್ತಿಯಲ್ಲಿ ತೊಡಗಿದ್ದು, ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಹೀಗೆ ಹಲವು ವರ್ಷಗಳಿಂದ ಮಲದ ಗುಂಡಿ ತೆರೆದ ಚರಂಡಿಗಳನ್ನು ಸ್ವಚ್ಛಗೊಳಿಸುತ್ತಾ ಬಂದಿರುವ ಕುಟುಂಬಗಳನ್ನು ನಿರ್ಲಕ್ಷ್ಯ ಮಾಡುವುದನ್ನು ಬಿಡಬೇಕು ಎಂದು ಒತ್ತಾಯಿಸಿದರು.
ಇಂತಹ ಕುಟುಂಬಗಳಿಗೆ ಸಮೀಕ್ಷೆ ಮಾಡಲು 2021ರಲ್ಲಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಸಮೀಕ್ಷೆ ಕಾರ್ಯದ ಮಾಹಿತಿ ಸರಿಯಾಗಿ ಗೊತ್ತಿಲ್ಲದೆ ಅವಕಾಶ ವಂಚಿತರಾಗಿರುವುದರಿಂದ ಹಲವು ಯೋಜನೆಗಳನ್ನು ಕೈತಪ್ಪಿವೆ. ಶಿಕ್ಷಣ ಮತ್ತು ಆರೋಗ್ಯ ಸೇವೆಯು ಸಮರ್ಪಕವಾಗಿ ನಮಗೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಬಾಬು ಮಾತನಾಡಿ, ಮತ್ತೊಮ್ಮೆ ಪ್ರತಿ ನಗರ ಮತ್ತು ಗ್ರಾಮೀಣ ಪ್ರದೇಶ ಮನೆಗಳಿಗೆ ಪ್ರಚಾರ ಮಾಡಿ ಮಾಹಿತಿ ನೀಡಲು ಅವಕಾಶ ಮಾಡಿಕೊಡಬೇಕು. ಹಾಗಾಗಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಕುಟುಂಬದವರೆಂದು ಪರಿಗಣಿಸುವ ಮೂಲಕ ನಮಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಗ್ರಾಮೀಣ ಭಾಗದಲ್ಲಿ ಅಗತ್ಯ ದಾಖಲೆಗಳನ್ನು ನೀಡುವುದಕ್ಕಾಗಿ ಅವರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಹಾಸಭಾದ ಜಿಲ್ಲಾಧ್ಯಕ್ಷೆ ನಾಗಮಣಿ, ಮುಖಂಡರಾದ ರೂಪಾದೇವಿ, ಮಂಗಳಾಗೌರಿ, ಮಾದಮ್ಮ ಇತರರಿದ್ದರು.