59 ಸಮುದಾಯಕ್ಕೆ ಮೀಸಲಾತಿ ಜಾರಿಗೊಳಿಸಲಿ: ಅರುಂಧತಿಯಾರ್ ಮಹಾಸಭಾದ ರಾಜ್ಯ ಸಂಚಾಲಕ ಆರ್.ಬಾಬು ಒತ್ತಾಯ

Arundhatiyar Mahasabha press conference Mandya
Published on

ಮಂಡ್ಯ: ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರ ಒಳ ಮೀಸಲಾತಿಯನ್ನು ಯಥಾ ಪ್ರಕಾರ ಜಾರಿಗೊಳಿಸಿ ಅರುಂಧತಿಯಾರ್ ಸಮುದಾಯ ಸೇರಿದಂತೆ 59 ಜಾತಿಗಳಿಗೆ ಶೇ.1ರಷ್ಟು ಮೀಸಲಾತಿ ಜಾರಿ ಮಾಡಬೇಕು ಎಂದು ಅಖಿಲ ಕರ್ನಾಟಕ ಅರುಂಧತಿಯಾರ್ ಮಹಾಸಭಾದ ಸಂಚಾಲಕ ಆರ್.ಬಾಬು ಒತ್ತಾಯಿಸಿದರು.

ಸಮುದಾಯವು ಪೌರಕಾರ್ಮಿಕ, ಸಫಾಯಿ ಕರ್ಮಚಾರಿ, ಮ್ಯಾನ್ಯುಯಲ್ ಸ್ಕಾೃವೆಂಜರ್, ಚಪ್ಪಲಿ ಹೊಲಿಯುವ ಕೆಲಸಗಳಿಗೆ ಮಾತ್ರವೇ ಸೀಮಿತವಾಗಿದೆ. ಪರಿಣಾಮ ಯಾವುದೇ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಾಧ್ಯವಾಗದೇ, ಉನ್ನತ ವ್ಯಾಸಂಗ ಮಾಡಿದ ಸಮುದಾಯದ ಯುವಕರು ಉದ್ಯೋಗಾವಕಾಶಕ್ಕಾಗಿ ಕಾಯುವಂತಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವಲತ್ತುಕೊಂಡರು.

ನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿಯಲ್ಲಿ ಶೇ.1ರಷ್ಟು ಮೀಸಲಾತಿ ಪರಿಗಣಿಸಿರುವುದು ತಿಳಿದು ಸಂತಸ ವ್ಯಕ್ತಪಡಿಸಿದ್ದೇವು. ಆದರೆ ರಾಜ್ಯ ಸರ್ಕಾರ ಒಳಮೀಸಲಾತಿಯ ವರ್ಗೀಕರಣದ ವೇಳೆ ಎ, ಬಿ, ಸಿ ಎಂದು ಮೂರು ಗುಂಪುಗಳನ್ನಾಗಿಸಿ, ಎರಡು ಗುಂಪುಗಳಿಗೆ ಶೇ.6ರಷ್ಟು, ಮತ್ತೊಂದು ಗುಂಪಿಗೆ ಶೇ.5ರಷ್ಟು ನೀಡಿ ಅರುಂಧತಿಯಾರ್ ಸಮುದಾಯವನ್ನು ಸೇರಿಸಿರುವುದನ್ನು ವಿರೋಧಿಸುತ್ತೇವೆ ಎಂದು ಖಂಡನೆ ವ್ಯಕ್ತಪಡಿಸಿದರು.

ಸರ್ಕಾರ ಅರುಂಧತಿಯಾರ್ ಸಮುದಾಯ ಅನ್ಯಾಯವೆಸಗುತ್ತಿದ್ದು, ಗೆಜೆಟ್ ನೋಟಿಫಿಕೇಷನ್ ಹೊರಡಿಸುವುದರ ಒಳಗೆ ನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿಯಂತೆ ಶೇ.1ರಷ್ಟು ಮೀಸಲಾತಿ ನೀಡಿ, ವರದಿಯನ್ನೇ ಅಂತಿಮಗೊಳಿಸಿ ಅರುಂಧತಿಯಾರ್ ಸಮುದಾಯಕ್ಕೆ ಪ್ರತ್ಯೇಕ ಒಳಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿದರು.

ಜಿಲ್ಲಾಧ್ಯಕ್ಷೆ ನಾಗಮಣಿ, ನಗರ ಅಧ್ಯಕ್ಷ ರವಿ, ರಾಜ್ಯ ಕಾರ್ಯದರ್ಶಿ ಸಂತೋಷ್, ಮದ್ದೂರು ತಾಲೂಕು ಅಧ್ಯಕ್ಷ ಪಳನಿ, ಅವಿನಾಶಿ, ವಿಜಯ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net