ಅರುಂಧತಿಯಾರ್ ಜಾತಿಯಿಂದ ಗುರುತಿಸಲಿ: ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬು ಒತ್ತಾಯ

Arundhatiyar Mahasabha press conference Mandya
Published on

ಮಂಡ್ಯ: ರಾಜ್ಯದ ನಗರ, ಪಟ್ಟಣ, ಪಂಚಾಯಿತಿ ವ್ಯಾಪ್ತಿಯಲ್ಲಿ ಸಫಾಯಿ ಕರ್ಮಚಾರಿ, ಮ್ಯಾನುಯಲ್ ಸ್ಕಾೃವೆಂಜರ್ ಸೇರಿದಂತೆ ಸ್ವಚ್ಛತಾ ಕಾರ್ಯಗಳನ್ನು ನೆರವೇರಿಸುವವರನ್ನು ಮಾದಿಗ ಜಾತಿಯಿಂದಲೇ ಗುರುತಿಸಿಕೊಂಡಿದ್ದಾರೆ. ಆದರೆ ಪ್ರತ್ಯೇಕ ಮೀಸಲಾತಿಗಾಗಿ ಅರುಂಧತಿಯಾರ್ ಜಾತಿಯಿಂದ ಗುರುತಿಸಬೇಕು ಎಂದು ಅರುಂಧತಿಯಾರ್ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬು ಒತ್ತಾಯಿಸಿದರು.

ಸಫಾಯಿ ಕರ್ಮಚಾರಿ, ಮ್ಯಾನುಯಲ್ ಸ್ಕಾೃವೆಂಜರ್ ಸೇರಿದಂತೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದವರನ್ನು ಆದಿದ್ರಾವಿಡ, ಆದಿ ಆಂಧ್ರ, ಆದಿ ಕರ್ನಾಟಕ ಜಾತಿ ಧೃಢೀಕರಣದಲ್ಲಿದೆ. ತಮಿಳುನಾಡಿನಲ್ಲಿ ಹಲವು ಸಂಶೋಧನೆ ಮೂಲಕ ನಮ್ಮ ಜಾತಿಯನ್ನು ಅರುಂಧತಿಯಾರೆಂದು ಗುರುತಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಾದಿಗ ಜಾತಿಯಲ್ಲಿ ಎಡ, ಬಲ ಎಂದಿದೆ. ಎಡಭಾಗದಲ್ಲಿ ಅರುಂಧತಿಯಾರ್ ಜಾತಿಯು ಬರಲಿದೆ. ಮಾದಿಗ ಜಾತಿಗೆ ಪ್ರತ್ಯೇಕ ಮೀಸಲಾತಿ ದೊರೆಯಲಿದ್ದು, ಅವರ ನಡುವೆ ಅರುಂಧತಿಯಾರ್ ಸಮುದಾಯ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮಾನತೆ ಪಡೆಯಬೇಕಾಗಿದೆ. ತ.ನಾಡಿನಲ್ಲಿ ಶೇ.3ರಷ್ಟು ಮೀಸಲಾತಿ ಅರುಂಧತಿಯಾರ್ ಸಮುದಾಯಕ್ಕೆ ನೀಡುತ್ತಿದ್ದು, ರಾಜ್ಯದಲ್ಲಿಯೂ ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ಜಾತಿ ಮೀಸಲಾತಿ ಸಂಬಂಧ ನ್ಯಾ.ನಾಗಮೋಹನ್‌ದಾಸ್ ಅವರು ವರದಿ ಸಲ್ಲಿಸಿದ್ದು, ಸರ್ಕಾರದಿಂದ ವರದಿಯ ವೈಜ್ಞಾನಿಕ ಸಮೀಕ್ಷೆ ನಡೆಯುತ್ತಿದೆ. ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಸಮಾಜದ ಬಂಧುಗಳು ಸಮೀಕ್ಷೆಯಲ್ಲಿ ಜಾತಿಯನ್ನು ಅರುಂಧತಿಯಾರೆಂದು ನಮೂದಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧ್ಯಕ್ಷೆ ಕೆ.ನಾಗಮಣಿ, ರೇಖಾ, ವಿಜಯ್, ಚಿನ್ನರಾಜು, ಬಿ.ರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net