ಕರ್ಣಾಟಕ ಬ್ಯಾಂಕ್ ಸಂಸ್ಥಾಪನಾ ದಿನಾಚರಣೆಯಲ್ಲಿ ಅರುಂಧತಿ ಭಟ್ಟಾಚಾರ್ಯ ಅಭಿಮತ

bank
Published on

ಮಂಗಳೂರು: ಬ್ಯಾಂಕಿಂಗ್ ಗಣಕೀಕರಣದಿಂದ ಡಿಜಿಟಲ್ ಆಗುತ್ತಿರುವುದು ಮುಂದಿನ ಅತಿ ಮಹತ್ವದ ಘಟ್ಟ. ಡಿಜಿಟಲೀಕರಣದಿಂದ ಗ್ರಾಹಕರಿಗೆ ಸ್ವಯಂಚಾಲಿತವಾಗಿ ಬಹುತೇಕ ಸೇವೆಗಳನ್ನು ನೀಡುವುದಕ್ಕೆ ಆದ್ಯತೆ ನೀಡಬೇಕಾಗಿದೆ ಎಂದು ಭಾರತೀಯ ಸ್ಟೇಟ್​ಬ್ಯಾಂಕ್ ಮಾಜಿ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ.

ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸಂಸ್ಥಾಪನಾ ದಿನಾಚರಣೆಯಲ್ಲಿ ‘ಭವಿಷ್ಯದ ಬ್ಯಾಂಕಿಂಗ್​ನತ್ತ ಒಂದು ಇಣುಕುನೋಟ’ ಎಂಬ ವಿಚಾರವಾಗಿ ಮಾತನಾಡಿದರು. ಡಿಜಿಟಲ್ ಬ್ಯಾಂಕಿಂಗ್ ಎಂದರೆ ಗ್ರಾಹಕರ ಆಗುಹೋಗು, ಬೇಕು ಬೇಡಗಳನ್ನು ಸ್ವಯಂ ಆಗಿ ಅರ್ಥೈಸಿಕೊಂಡು ಅದಕ್ಕೆ ಪೂರಕ ಸೇವೆ ನೀಡಲು ಸೌಕರ್ಯ ಸೃಷ್ಟಿಸಬೇಕಾಗುತ್ತದೆ. ಹಿಂದೆ ಸಾಂಪ್ರದಾಯಿಕ ಬ್ಯಾಂಕಿಂಗ್​ನಿಂದ ಗಣಕೀಕರಣಕ್ಕೆ ಹೋಗುವಾಗಲೂ ಇದೇ ರೀತಿಯ ಗೊಂದಲವಿತ್ತು. ಬ್ಯಾಂಕ್​ಗಳು ಸಂಪತ್ತಿನ ಸಲಹೆಗಾರಿಕೆ, ಡಿಜಿಟಲ್ ಸಹಾಯಕರ ಲೋಪದೋಷಗಳನ್ನು ಅರಿತುಕೊಂಡು ಸಮಗ್ರ ಸಲಹೆ ನೀಡಬಲ್ಲ ಕ್ಷಮತೆ ಬೆಳೆಸಿಕೊಂಡರೆ ಭವಿಷ್ಯದ ಬ್ಯಾಂಕಿಂಗ್ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದರು.

ಸಿಎಸ್​ಆರ್ ನಿಧಿಯನ್ವಯ ಬೆಂಗಳೂರಿನ ಪೂರ್ಣಪ್ರಜ್ಞ ಸಂಶೋಧನಾ ಕೇಂದ್ರ, ಚಿಕ್ಕಮಗಳೂರಿನ ಪ್ರಬೋಧಿನಿ ಟ್ರಸ್ಟ್ ಹಾಗೂ ಬಂಟ್ವಾಳ ಅಳಿಕೆಯ ಸತ್ಯಸಾಯಿ ಲೋಕಸೇವಾ ಟ್ರಸ್ಟ್​ಗಳಿಗೆ ನೆರವಿನ ಬದ್ಧತಾ ಪತ್ರ ಹಸ್ತಾಂತರಿಸ ಲಾಯಿತು.

ಬ್ಯಾಂಕ್ ಅಧ್ಯಕ್ಷ ಪಿ.ಜಯರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ವಹಿವಾಟು ಅಧಿಕಾರಿ ಗೋಕುಲದಾಸ್ ಪೈ ವಂದಿಸಿದರು. ಜೆನಿಫರ್ ಮೊರಾಸ್ ಕಾರ್ಯಕ್ರಮ ನಿರೂಪಿಸಿದರು.

ಡಿಜಿಟಲ್ ಬ್ಯಾಂಕಿಂಗ್​ನತ್ತ ಗಂಭೀರ ಹೆಜ್ಜೆ: ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್., ಡಿಜಿಟಲ್ ಬ್ಯಾಂಕಿಂಗ್​ನತ್ತ ಗಂಭೀರ ಹೆಜ್ಜೆ ಇರಿಸಿರುವ ಕರ್ಣಾಟಕ ಬ್ಯಾಂಕ್ ಬೆಂಗಳೂರಿನಲ್ಲಿ ಒಂದು ಶಾಖೆಯನ್ನು ಪೂರ್ತಿ ಡಿಜಿಟಲ್ ಆಗಿ ರೂಪಿಸಿದೆ. ಇದೇ ವ್ಯವಸ್ಥೆಯನ್ನು ವಿಸ್ತರಣೆ ಮಾಡಲಾಗುವುದು ಎಂದರು.

ವಿಶ್ವಾಸ ಉಳಿಸಿಕೊಳ್ಳುವುದು ಮುಖ್ಯ

ಬ್ಯಾಂಕ್​ಗಳ ಮೇಲಿಟ್ಟಿರುವ ನಂಬಿಕೆ ವಿಶ್ವಾಸವನ್ನು ಉಳಿಸಿಕೊಳ್ಳುವುದು, ಅದಕ್ಕಾಗಿ ಗ್ರಾಹಕರ ಡಾಟಾಬೇಸ್​ನ್ನು ಯಾವುದೇ ಕಾರಣಕ್ಕೂ ಅಪಾತ್ರರ ಕೈಗೆ ಸೇರದಂತೆ ಮಾಡುವುದು, ಸೈಬರ್ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡುವುದು ಮುಂಬರುವ ಬ್ಯಾಂಕಿಂಗ್ ದಿನಗಳಲ್ಲಿ ಅತೀ ಅಗತ್ಯವೆನಿಸಲಿದೆ. ಭವಿಷ್ಯಕ್ಕಾಗಿ ಡಿಜಿಟಲ್ ಪಯಣ ದುಬಾರಿ ವೆಚ್ಚದ್ದಾದರೂ, ಅದರಿಂದ ಆಗುವ ಪ್ರಯೋಜನಗಳೇ ಅದನ್ನು ಅನಿವಾರ್ಯವಾಗಿಸಿವೆ ಎಂದು ಅರುಂಧತಿ ಭಟ್ಟಾಚಾರ್ಯ ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net