

ಸಿದ್ದಾಪುರ: ತಾಲೂಕಿನಾದ್ಯಂತ ಅಡಕೆ ಎಲೆಚುಕ್ಕಿ ರೋಗ ತೀವ್ರವಾಗಿ ಹರಡುತ್ತಿದ್ದು, ಬೆಳೆಗಾರರು ಮುನ್ನೆಚ್ಚರಿಕೆವಹಿಸಿ ರೋಗ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ತಾಲೂಕು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಅರುಣ ಎಚ್.ಜಿ. ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದವರು ಎಲೆಚುಕ್ಕಿ ರೋಗ ನಿಯಂತ್ರಣದ ಕುರಿತು ಪತ್ರಕರ್ತರೊಂದಿಗೆ ಶನಿವಾರ ಆಯೋಜಿಸಿದ್ದ ಮಾಹಿತಿ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಈಗಾಗಲೇ 1900 ಹೆಕ್ಟೇರ್ ಅಡಕೆ ಕ್ಷೇತ್ರದಲ್ಲಿ ಎಲೆ ಚುಕ್ಕಿ ರೋಗ ಆವರಿಸಿದೆ. ಅತಿಯಾದ ಮಳೆ, ನೆಲದ ತೇವದಿಂದ ಈ ರೋಗ ಉಲ್ಪಣಿಸುತ್ತಿದ್ದು, ಶೀಲಿಂದ್ರಗಳು ಗಾಳಿಯಲ್ಲಿ ರೋಗವನ್ನು ಹರಡುತ್ತವೆ. ಅಡಕೆ ಎಲೆ, ಹೆಡ, ಹಾಳೆ, ಕಾಯಿಗಳಿಗೂ ಈ ಶೀಲಿಂದ್ರಗಳು ಅಂಟಿಕೊಳ್ಳುತ್ತವೆ. ಈ ರೋಗವನ್ನು ಸಾಮೂಹಿಕ ಪ್ರಯತ್ನದಿಂದ ಮಾತ್ರ ಹೋಗಲಾಡಿಸಲು ಸಾಧ್ಯ. ತೋಟದಲ್ಲಿ ಬಸಿಗಾಲುವೆ ನಿರ್ವಹಣೆ ಹಾಗೂ ಅಗತ್ಯ ಪೋಷಕಾಂಶಗಳನ್ನು ಮರಗಳಿಗೆ ಒದಗಿಸಬೇಕು. ಮಣ್ಣು ಪರೀಕ್ಷೆ ಮಾಡಿಸಿ ಅದರಲ್ಲಿ ಸೂಚಿಸುವ ಪ್ರಮಾಣದಲ್ಲಿ ಕನಿಷ್ಠ ಎಕರೆಗೆ 5 ಕ್ವಿಂಟಾಲ್ ಸುಣ್ಣವನ್ನು ಅಡಕೆ ಮರಗಳ ಬೇರುವಲಯಕ್ಕೆ ನೀಡಬೇಕು. ಸುಣ್ಣ ಹಾಕಿದ ಒಂದು ತಿಂಗಳ ನಂತರ ಸಾವಯವ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಸಮತೋಲಿತವಾಗಿ ನೀಡಬೇಕು. ಪೋಟ್ಯಾಷ್, ರಂಜಕ, ಸಾರಜನಕವಿರುವ ಗೊಬ್ಬರವನ್ನು ನಿಗದಿತ ಪ್ರಮಾಣದಲ್ಲಿ ನೀಡುವದರಿಂದ ರೋಗ ನಿಯಂತ್ರಿಸಲು ಸಾಧ್ಯ ಎಂದರು.
ರೋಗ ಪ್ರಾರಂಭದ ಹಂತದಲ್ಲಿದ್ದರೆ ಅಡಕೆ ಕೊನೆ ಹಾಗೂ ಹೆಡಗಳಿಗೆ ಬೋಡೋ, ಸುಣ್ಣ ಮಿಶ್ರಣವನ್ನು ಸಿಂಪಡಿಸಬಹುದು. ಹೆಚ್ಚು ಬಾಧೆಯಿರುವ ತೋಟಗಳಲ್ಲಿ ಮಳೆ ಬೀಳದ ಸಮಯದಲ್ಲಿ ಪೋ›ಪಿಕೊನ್ಜೋಲ್ ಎನ್ನುವ ಶೀಲಿಂದ್ರ ನಾಶಕವನ್ನು 1 ಲೀಟರ್ ನೀರಿಗೆ ಒಂದು ಮಿಲಿ ಲೀ. ಬೆರೆಸಿ ಎಲೆಗಳಿಗೆ ಸಿಂಪಡಿಸಬೇಕು. ರೋಗ ತೀವ್ರವಾಗಿದ್ದಲ್ಲಿ ಮೊದಲ ಸಿಂಪರಣೆಯ 25-30ದಿನದ ನಂತರ 2ನೇ ಬಾರಿ ಅಂತರ್ವ್ಯಾಪಿ ಶಿಲೀಂದ್ರನಾಶಕಗಳಾದ ಟೆಬುಕೋನಜೋಲ ಅಥವಾ ಹೆಕ್ಸೋಕೋನಜೋಲ್ ಸಿಂಪಡಿಸಬೇಕು. ಜನವರಿ ನಂತರ ಪರೊಪಿಕೋನಜೋಲ್ ಸಿಂಪರಣೆ ಮಾಡುವಾಗ ಅಡಕೆ ಶಿಂಗಾರ ಒಣಗುವುದಕ್ಕೆ ಸಿಂಪಡಿಸಬಹುದು ಎಂದರು.
ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದಿನೇಶ ಹೆಗಡೆ ಚಳ್ಳೆಹದ್ದ ಮಾತನಾಡಿ, ಬೆಳೆಗಾರರು ಆರ್ಥಿಕವಾಗಿ ಕುಸಿದರೆ ಸಹಕಾರಿ ಸಂಘಗಳಿಗೂ ಆಪತ್ತು. ಬೆಳೆಗಾರರು ನಿರ್ಲಕ್ಷ್ಯ ವಹಿಸದೇ ರೋಗನಿಯಂತ್ರಣಕ್ಕೆ ಮುಂದಾಗಬೇಕು. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಬಹುದು ಎಂದರು. ಹಾರ್ಸಿಕಟ್ಟಾ ಸೇ.ಸ.ಸಂಘದ ನಿರ್ದೇಶಕ ನಾಗರಾಜ ಹೆಗಡೆ ಹುಲಿಮನೆ ಇದ್ದರು.