

ಶಿವಮೊಗ್ಗ: ವಿಶಿಷ್ಟ ಸ್ಥಾನ ಪಡೆದಿರುವ ಮಲೆನಾಡು ಗಿಡ್ಡ ತಳಿ ಬಗ್ಗೆ ಅಧ್ಯಯನ ಕೈಗೊಳ್ಳಲು ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯ ಆವರಣದಲ್ಲಿ ಸ್ಥಾಪಿಸಿರುವ ಮಲೆನಾಡು ಗಿಡ್ಡ ತಳಿ ಸಂಶೋಧನೆ ಹಾಗೂ ಮಾಹಿತಿ ಕೇಂದ್ರ ಸ್ಥಗಿತಗೊಂಡಿದ್ದು ಅದನ್ನು ಮತ್ತೆ ಆರಂಭಿಸಬೇಕೆಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಮಂಗಳವಾರ ಮಾತನಾಡಿದ ಅವರು, ಮಲೆನಾಡು ಗಿಡ್ಡ ತಳಿಯ ಜಾನುವಾರು ಭೌಗೋಳಿಕ ಮಾನ್ಯತೆ ಹೊಂದಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಈ ತಳಿ ಕಂಡು ಬರುತ್ತದೆ. ಇದರ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ವ್ಯಾಪಕ ಬೇಡಿಕೆಯಿದೆ ಎಂದರು.
ಇದರ ಹಾಲಿನಲ್ಲಿ ಇರಬಹುದಾದ ಇನ್ನಷ್ಟು ವಿಶೇಷತೆಗಳ ಬಗ್ಗೆ ವ್ಯಾಪಕ ಸಂಶೋಧನೆಯ ಅಗತ್ಯವಿದೆ. ಹೀಗಾಗಿ ಸಂಶೋಧನೆಗೆ ಅನುಕೂಲವಾಗುವಂತೆ ಕೇಂದ್ರವನ್ನು ಮತ್ತೆ ಆರಂಭಿಸಬೇಕು. ಅಗತ್ಯ ಅನುದಾನವನ್ನೂ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.