ಅನುದಾನಿತ ಶಾಲೆಗಳ ಮೇಲೆ ಗದಪ್ರಹಾರ, ಸರ್ಕಾರದ ಅಕ್ರಮಕ್ಕೆ ಅರುಣ ಶಹಾಪುರ ಖಂಡನೆ

Arun Shahapura
Published on

ವಿಜಯಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.60 ಕ್ಕಿಂತ ಕಡಿಮೆ ಫಲಿತಾಂಶ ದಾಖಲಿಸಿದ ಅನುದಾನಿತ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು.

ರಾಜ್ಯ ಸರ್ಕಾರ ಫಲಿತಾಂಶ ಸುಧಾರಣೆಗೆ ಕೈಗೊಳ್ಳುವ ಕ್ರಮ ಸ್ವಾಗತಾರ್ಹ. ಆದರೆ ಸಮಗ್ರ ಬದಲಾವಣೆಗೆ ಮುಂದಾಗುವ ಬದಲು ಕೇವಲ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿರುವುದು ಅಕ್ಷಮ್ಯ ಅಪರಾಧ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿದ್ದು, ಕೇವಲ ಅನುದಾನಿತ ಶಾಲೆಗಳಿಗೆ ಮಾತ್ರ ಅನ್ವಯಿಸಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನುಳಿದ ಶಾಲೆಗಳಿಗೆ ಈ ಆದೇಶ ಅನ್ವಯಿಸುತ್ತದೆಯೇ ಎಂಬುದರ ಬಗ್ಗೆ ಸ್ಪಷ್ಟಪಡಿಸಬೇಕೆಂದರು. ಅಲ್ಲದೇ ಈ ಆದೇಶವೇ ಅವೈಜ್ಞಾನಿಕವಾಗಿದ್ದು, ಇದಕ್ಕೆ ತಮ್ಮ ವಿರೋಧವಿದೆ ಎಂದರು.

ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಶಾಲೆಗಳಲ್ಲಿ ಮೂಲ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ. ಮಧ್ಯಾಹ್ನದ ಬಿಸಿಯೂಟ, ಜನಗಣತಿ, ಜಾತಿಗಣತಿ ಹೀಗೆ ಒಂದಾದ ಮೇಲೊಂದರಂತೆ ಶಿಕ್ಷಕರ ಮೇಲೆ ಜವಾಬ್ದಾರಿ ಹೊರಿಸಲಾಗುತ್ತಿದೆ. ಮತದಾರ ಪಟ್ಟಿ ಪರಿಷ್ಕರಿಸಲು ಸಹ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಇಷ್ಟೆಲ್ಲಾ ಜವಾಬ್ದಾರಿ ಹೊತ್ತು ಶಿಕ್ಷಕರು ಪಾಠ ಮಾಡುವುದು ಯಾವಾಗ? ಸರ್ಕಾರಿ ಶಿಕ್ಷಕರಲ್ಲೂ ಶೇ.30 ರಷ್ಟು ಹುದ್ದೆಗಳು ಖಾಲಿ ಇವೆ. ಒಳಮೀಸಲಾತಿ ವ್ಯವಸ್ಥೆ ಜಾರಿ ಆಗುವವರೆಗೂ ನೇಮಕ ಪ್ರಕ್ರಿಯೆ ತಡೆಹಿಡಿಯಲಾಗಿದೆ. ಹೀಗಾಗಿ ಆ ಕಾರ್ಯಭಾರ ಕೂಡ ಇರುವ ಶಿಕ್ಷಕರ ಮೇಲೆಯೇ ಬೀಳುತ್ತಿದೆ ಎಂದರು.

ಸರ್ವ ಶಿಕ್ಷಾ ಅಭಿಯಾನದ ನಂತರ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ಶಾಲೆಗಳಿಗೆ ಮೂಲ ಸೌಕರ್ಯ ಇಲ್ಲ. ಸುಣ್ಣ ಬಣ್ಣ ಬಳಿಯಲು ಸಹ ಅನುದಾನ ಇಲ್ಲ. ಇಷ್ಟೆಲ್ಲ ಸಮಸ್ಯೆಗಳಿನ್ನು ಇಟ್ಟುಕೊಂಡು ಕೇವಲ ಅನುದಾನಿತ ಶಾಲೆಗಳನ್ನು ಗುರಿಯಾಗಿಸಿಕೊಂಡು ಆದೇಶ ಹೊರಡಿಸಿರುವುದು ಯಾವ ನ್ಯಾಯ? ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ತನ್ನ ಲೋಪದೋಷ ಸರಿಪಡಿಸಿಕೊಳ್ಳದೇ ಹೋದಲ್ಲಿ ಅಸಹಕಾರ ಚಳುವಳಿ ಕೈಗೊಳ್ಳಬೇಕಾದ ಸ್ಥಿತಿ ನಿರ್ಮಾಣ ವಾಗಬೇಕಾಗುತ್ತದೆ ಎಂದರು.

ಎಲ್.ಬಿ. ಪಾಟೀಲ ಮಾತನಾಡಿ, ಶಾಲೆಗಳಲ್ಲಿ ಶಿಕ್ಷಕರಿಲ್ಲ; ಫಲಿತಾಂಶ ಸುಧಾರಿಸಿ ಎನ್ನುತ್ತಿದ್ದಾರೆ. ಮೂಲ ಸೌಕರ್ಯ ಇಲ್ಲ; ಗುಣಮಟ್ಟದ ಶಿಕ್ಷಣ ನೀಡಿ ಎನ್ನುತ್ತಾರೆ. ಸರ್ಕಾರ ಹಾಗೂ ಅನುದಾನ ರಹಿತ ಶಿಕ್ಷಕರಿಗಿಲ್ಲದ ನಿಯಮಾವಳಿ ಅನುದಾನಿತ ಶಾಲೆಗಳಿಗೆ ಮಾತ್ರ ಅನ್ವಯಿಸುವುದೇಕೆ? ಸರ್ಕಾರ ತನ್ನ ನಿಲುವು ಬದಲಿಸದೇ ಹೋದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಅಸಹಕಾರ ಚಳುವಳಿ ಕೈಗೊಳ್ಳುವುದು ನಿಶ್ಚಿತ ಎಂದರು.

ಮುಖಂಡ ಚಂದ್ರಶೇಖರ ಕವಟಗಿ, ವಿಜಯ ಜೋಶಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net