ಪ್ರಕೃತಿಯಲ್ಲೇ ದೇವರನ್ನು ಕಂಡ ಕಲಾವಿದರು

JANAPADA
Published on

ನರೇಗಲ್ಲ: ಪಟ್ಟಣದ ಕೋಡಿಕೊಪ್ಪದಲ್ಲಿನ ಶ್ರೀಅನ್ನದಾನೇಶ್ವರ ಮಂಟಪದಲ್ಲಿ ಅಕ್ಷರ ಭಾರತ ಪ್ರತಿಷ್ಠಾನ ಗದಗ ಹಾಗೂ ನರೇಗಲ್ಲದ ಎಸ್‌ಎವಿವಿಪಿ ಸಮಿತಿಯಿಂದ ಸೋಮವಾರ 60ನೆ ಶಿವಾನುಭವಗೋಷ್ಠಿ ಜರುಗಿತು.

ಕೊತಬಾಳದ ಅರುಣೋದಯ ಕಲಾ ತಂಡದ ಸಂಸ್ಥಾಪಕ ಶಂಕ್ರಣ್ಣ ಸಂಕಣ್ಣವರ ಮಾತನಾಡಿ, ‘ಜನಪದರಿಗೆ ತಮ್ಮ ಸುತ್ತಲಿನ ಸೃಷ್ಟಿಯೇ ಎಲ್ಲವೂ ಆಗಿತ್ತು. ಅವರು ಗಾಳಿ, ನೀರು, ವಾಯು, ಗಿಡಮರಗಳೆಲ್ಲವನ್ನೂ ದೇವರೆಂದೆ ಪೂಜಿಸುತ್ತಿದ್ದರು. ಜತೆಗೆ ತಮಗೆ ಅನ್ನ ನೀಡುವ ಭೂಮಿ ಮತ್ತು ಎತ್ತುಗಳಿಗೂ ಅವರು ದೇವರ ಸ್ಥಾನ ಕೊಟ್ಟು ಅವುಗಳ ಪೂಜೆಯನ್ನೇ ತಮ್ಮ ಹಬ್ಬದ ಮುಖ್ಯ ಸಂಗತಿಯನ್ನಾಗಿಸಿಕೊಂಡಿದ್ದರು. ಕಲಿಯುಗವು ಇದೇ ಯುಗಾದಿಯಂದು ಪ್ರಾರಂಭಗೊಂಡಿತು ಎಂದು ಅವರು ನಂಬಿದ್ದರು. ಆದ್ದರಿಂದಲೆ ಈ ಹಬ್ಬವನ್ನು ಯುಗದ ಆದಿ ಅಂದರೆ ಯುಗದ ಪ್ರಾರಂಭವೆಂದು ಯುಗಾದಿಯೆಂದು ಕರೆದರು. ಉಳಿದೆಲ್ಲ ಹಬ್ಬಗಳಿಗಿಂತ ಜನಪದರು ಈ ಹಬ್ಬಕ್ಕೆ ವಿಶೇಷ ಮಹತ್ವ ನೀಡಿ, ಇದನ್ನು ಹಿಂದುಗಳಿಗೆ ಹೊಸ ವರ್ಷದ ಪ್ರಾರಂಭವೆಂದು ಆಚರಿಸುತ್ತ ಬರಲಾಗಿದೆ. ಬೇವು-ಬೆಲ್ಲ ಎರಡೂ ಎಲ್ಲರ ಜೀವನದಲ್ಲಿಯೂ ಇರುತ್ತವೆ. ಬರೀ ಬೆಲ್ಲ ಬೇಕು, ಬೇವು ಬೇಡವೆಂದರೆ ಜೀವನ ನಡೆಯುವುದಿಲ್ಲ. ಆದ್ದರಿಂದ ಎರಡನ್ನೂ ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ಜೀವನ ಅತ್ಯಂತ ಸುಖಮಯವಾಗಿ ಸಾಗುತ್ತದೆ. ನಮ್ಮ ಪ್ರಕೃತಿ ಮಾತೆಯನ್ನು ನಾವುಗಳು ಕಾಪಾಡಿಕೊಂಡಾಗ ಮಾತ್ರ ನಾವು ಸುಖದಿಂದ ಬಾಳಬಹುದು ಎಂದರು.

ಇದೇ ಸಂದರ್ಭದಲ್ಲಿ ಸಂಕಣ್ಣವರ ನೇತೃತ್ವದಲ್ಲಿ ಅಲ್ಲಿಕೇರಿ ಬಸವೇಶ್ವರ ಕಲಾ ತಂಡ ಮನ್ನಿಕಟ್ಟಿಯ ಕಲಾವಿದರಿಂದ ಅನೇಕ ಜಾನಪದ ನೃತ್ಯಗಳನ್ನು ಪ್ರದರ್ಶಿಸಲಾಯಿತು. ಶಿಕ್ಷಕ ಬಸನಗೌಡ ಪಾಟೀಲ, ಸಂಸ್ಥೆಯ ಆಡಳಿತಾಧಿಕಾರಿ ಎನ್. ಆರ್. ಗೌಡರ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನಪ್ಪ ಮೆಣಸಗಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ.ಎ. ಅರವಟಗಿಮಠ, ಬೀಚಿ ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ, ಮುಖ್ಯ ಶಿಕ್ಷಕ ಸಂಗಯ್ಯ ಪ್ರಭುಸ್ವಾಮಿಮಠ ಉಪಸ್ಥಿತರಿದ್ದರು. ಡಾ. ಕಲ್ಲಯ್ಯ ಹಿರೇಮಠ ನಿರೂಪಿಸಿದರು. ಮುಖ್ಯ ಶಿಕ್ಷಕ ಎಸ್. ಎನ್. ಹೂಲಗೇರಿ ಸ್ವಾಗತಿಸಿದರೆ, ಉಪನ್ಯಾಸಕ ಎಫ್.ಎನ್. ಹುಡೇದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net