

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಮಳೆಯಿಂದಾಗಿ ಕಲಾತಂಡಗಳು ತಮ್ಮ ಕಲೆ ಪ್ರದರ್ಶಿಸಲು ಸಾಧ್ಯವಾಗಲಿಲ್ಲ.
ಮಳೆ ಒಂದೆಡೆಯಾದರೆ ಮತ್ತೊಂದೆಡೆ ಹನುಮನ ಬಾಲದಂತೆ ಅತಿ ಉದ್ದವಿದ್ದ ಕಲಾತಂಡ, ಸ್ತಬ್ಧಚಿತ್ರಗಳಿಂದಾಗಿ ಮೆರವಣಿಗೆ ಸಾಗಲು ಸಮಯ ಮೀರುತ್ತಿತ್ತು. ಹೀಗಾಗಿ ಕಲಾತಂಡಗಳು, ಕಲಾವಿದರು ಅಲಂಕಾರ ಮಾಡಿಕೊಂಡು ಸುಮ್ಮನೆ ಮೆರವಣಿಗೆಯಲ್ಲಿ ಪ್ರದರ್ಶನ ಮಾಡಿಕೊಂಡು ಮುಂದೆ ಸಾಗಿದಂತಿತ್ತು. ಅಲ್ಲದೇ ಇಷ್ಟು ವರ್ಷಗಳ ಕಾಲ ಒಂದಾದ ಮೇಲೆ ಒಂದರಂತೆ ಮೊದಲೇ ನಿಗದಿ ಪಡಿಸಿದಂತೆ ಕ್ರಮ ಸಂಖ್ಯೆಯಲ್ಲಿ ಸಾಗುತ್ತಿದ್ದ ಮೆರವಣಿಗೆ ಈ ಬಾರಿ ಲೆಕ್ಕಾಚಾರ ತಪ್ಪಿತ್ತು. ಈ ಬಾರಿಯೂ ಕ್ರಮಸಂಖ್ಯೆ ನಿಗದಿ ಪಡಿಸಿದ್ದರೂ, ಮಳೆಯಿಂದಾಗಿ ಯಾವ ತಂಡ, ಯಾವಾಗಬೇಕಾದರೂ ಹೋಗುವಂತಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಸಹೋದ್ಯೋಗಿಗಳು ಕೋಟೆ ಅಂಜನೇಯಸ್ವಾಮಿ ದೇವಸ್ಥಾನದಲ್ಲಿ ನಂದಿಗೆ ಪೂಜೆ ನೆರವೇರಿಸುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಆರಂಭವಾಗುತ್ತಿದ್ದಂತೆಯೇ ನಿಶಾನೆ, ನೌಫಧ್, ಸಾಲಾನೆಗಳು ಸಾಲ ತೆರಳಿ, ಚಾಮರಾಜನಗರ ಜಿಲ್ಲೆ ಬೂದಿತಿಟ್ಟು ಶ್ರೀಬಸವೇಶ್ವರ ಬಳಗದ ಕೊಂಬು ಕಹಳೆ ಸಾಗಿತು. ಬಳಿಕ ಯಾದಗಿರಿ ಜಿಲ್ಲೆ ಮಂಜಲಾಪುರದ ಲಂಬಾಣಿ ನೃತ್ಯ ಕಲಾತಂಡ, ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕು ಅಮ್ಮತ್ತಿಯ ಕೊಡವವಾಲಗ ತಂಡ ಮೆರವಣಿಗೆಯಲ್ಲಿ ಮುಂದೆ ಸಾಗುತ್ತಿದ್ದಂತೆಯೇ ಜೋರು ಮಳೆ ಆರಂಭಗೊಂಡಿತು. ಹೀಗಾಗಿ ಮಳೆಯಲ್ಲಿಯೇ ತೊಯ್ದ ಕಲಾವಿದರು, ಸಾಧ್ಯವಾದಷ್ಟು ಪ್ರದರ್ಶನ ನೀಡಿದರು. ಆದರೆ ಸಮಯವಾಗುತ್ತದೆ ಎಂದು ಪೊಲೀಸರು, ಬೇಗ ಮುಂದೆ ಹೋಗುವಂತೆ ಆಗಾಗ್ಗೆ ಬಲವಂತ ಮಾಡುತ್ತಿದ್ದರು. ಇದರಿಂದ ಕಲಾತಂಡಗಳು, ಕೆಲವೇ ನಿಮಿಷಗಳಲ್ಲಿ ಅರಮನೆ ಆವರಣದಿಂದ ಹೊರ ಹೋಗುವಂತಾಯಿತು.
1600 ಕಲಾವಿದರ ಭಾಗಿ: ಜಂಬೂಸವಾರಿ ಮೆರವಣಿಗೆಯಲ್ಲಿ 57 ಪ್ರಕಾರದ 98 ಕಲಾತಂಡಗಳಿಂದ ಸುಮಾರು 1600 ಕಲಾವಿದರು ಭಾಗವಹಿಸಿದ್ದರು. ಇಷ್ಟು ವರ್ಷಕಾಲ ಸಾಮಾನ್ಯವಾಗಿ ಕಲಾತಂಡ, ಸ್ತಬ್ಧಚಿತ್ರ, ಪೊಲೀಸ್ ಬ್ಯಾಂಡ್ ಸೇರಿದಂತೆ ವೆುರವಣಿಗೆಯಲ್ಲಿ ಸಾಗುವ ತಂಡಗಳನ್ನು ನೂರರ ಒಳಗೆ ಸೀಮಿತಗೊಳಿಸಲಾಗುತ್ತಿತ್ತು. ಆದರೆ ಈ ಬಾರಿ ಮೆರವಣಿಗೆಯಲ್ಲಿ ಸಾಗಿದ ಸಂಖ್ಯೆ 148 ತಂಡಗಳು ಇತ್ತು. ಕಲಾತಂಡ 98 ಇದ್ದರೆ, 51 ಸ್ತಬ್ಧಚಿತ್ರ, ಅಲ್ಲದೇ ಪೊಲೀಸ್, ಫಿರಂಗಿ, ಆಗ್ನಿಶಾಮಕದಳ, ನಾದಸ್ವರ, ಅರಮನೆ ಮಂಡಳಿ ತಂಡ, ಬ್ಯಾಂಡ್ ಸೇರಿದಂತೆ ಇನ್ನಿತರ ತಂಡಗಳು ಸಾಗಿದವು.