ಜಲಪಾತೋತ್ಸವ, ದಸರಾಗೆ ಸ್ಥಳೀಯರ ಕಡೆಗಣನೆ: ನಗರದಲ್ಲಿ ಕಲಾವಿದರ ಪ್ರತಿಭಟನೆ

Artists protest Mandya
Published on

ಮಂಡ್ಯ: ಮಳವಳ್ಳಿಯ ಗಗನಚುಕ್ಕಿ ಜಲಪಾತೋತ್ಸವ ಹಾಗೂ ಶ್ರೀರಂಗಪಟ್ಟಣ ದಸರಾ ಮಹೋತ್ಸವದಲ್ಲಿ ಸ್ಥಳೀಯ ಕಲಾವಿದರನ್ನು ಕಡೆಗಣಿಸಿರುವುದನ್ನು ಖಂಡಿಸಿ ವಿವಿಧ ಕಲಾ ಪ್ರಕಾರಗಳ ಕಲಾವಿದರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸರ್‌ಎಂವಿ ಪ್ರತಿಮೆ ಎದುರು ಜಮಾಯಿಸಿದ ಕಲಾವಿದರು ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಬ್ಬ, ಜಯಂತ್ಯುತ್ಸವ, ಸಮ್ಮೇಳನ ಹಾಗೂ ಉತ್ಸವಗಳಲ್ಲಿ ಜಿಲ್ಲೆಯ ಕಲಾವಿದರನ್ನು ಕಡೆಗಣಿಸಿ ಇವೆಂಟ್ಸ್ ಮ್ಯಾನೇಜ್ಮೆಂಟ್‌ಗಳಿಗೆ ಕಾರ್ಯಕ್ರಮಗಳನ್ನು ಒಪ್ಪಿಸುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ ಎಂದು ಶಾಸಕರು ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ಸಾಕಷ್ಟು ಕಲೆ ಹಾಗೂ ಕಲಾವಿದರ ಮೂಲಸ್ಥಾನ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಜಿಲ್ಲೆಯ ಕಲಾವಿದರಿಗೆ ದೊಡ್ಡ ಸ್ಥಾನಮಾನ ಸಿಕ್ಕಿದೆ. ಸಾವಿರಾರೂ ಕಲಾವಿದರು ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೆ ಹಲವು ವರ್ಷದಿಂದ ಕಲೆ ಹಾಗೂ ಕಲಾವಿದರನ್ನು ಬೆಳೆಸಿಕೊಂಡು ಬರುತ್ತಿದ್ದಾರೆ. ಚಿಕ್ಕಮಟ್ಟದಿಂದ ಹಿಡಿದು ಎಷ್ಟೇ ದೊಡ್ಡಮಟ್ಟದ ಉತ್ಸವ, ಸಮ್ಮೇಳನ, ನಾಡಹಬ್ಬ, ರಾಷ್ಟ್ರೀಯ ಹಬ್ಬ, ಜಾತ್ರೆಯಲ್ಲಿ ಮಂಡ್ಯದ ಕಲಾವಿದರಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಇದು ಸರ್ವಕಾಲಕ್ಕೂ ಒಪ್ಪುವಂತಹ ವಿಷಯ. ಆದರೆ ಎಲ್ಲ ಜವಾಬ್ದಾರಿ ಮರೆತು ಸ್ಥಳೀಯ ಕಲಾವಿದರನ್ನು ನಿರ್ಲಕ್ಷೃ ಮಾಡಲಾಗುತ್ತಿದೆ. ಪರಿಣಾಮ ಕಲಾವಿದರು ಅಳಿವಿನ ಹಂಚಿಗೆ ದೂಡುತ್ತಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕಲಾವಿದರಾದ ಸಂತೆಕಸಲಗೆರೆ ಬಸವರಾಜು, ಹನಿಯಂಬಾಡಿ ಶೇಖರ್, ಎಚ್.ಪಿ.ವೈರಮುಡಿ, ಕಾರಸವಾಡಿ ಮಹದೇವು, ತಗಹಳ್ಳಿ ವೆಂಕಟೇಶ್, ಸಿ.ಕುಮಾರಿ, ಲಂಕೇಶ್, ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net