ಅನುದಾನ ಬಿಡುಗಡೆಗೆ ಕಲಾವಿದರ ಒತ್ತಾಯ

16
Published on

ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಎರಡು ವರ್ಷದಿಂದ ಅನುದಾನ ಬಿಡುಗಡೆಯಾಗದೆ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಸರಗೂರು ತಾಲೂಕು ಆಗತ್ತೂರು ಗ್ರಾಮದ ಜಾನಪದ ಕಲಾವಿದ ಡಾ.ಪಿ. ಜವರನಾಯ್ಕ ಆಗ್ರಹಿಸಿದರು.

ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಕಲಾವಿದರು ಇಲಾಖೆ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಇವರಿಗೆ ಕಳೆದ ಎರಡು ವರ್ಷಗಳಿಂದಲೂ ಅನುದಾನ ಬಿಡುಗಡೆಗೊಂಡಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಕಲಾವಿದರಿಗೆ ಗುರುತಿನ ಚೀಟಿ ನೀಡಬೇಕು, ವೇಷಭೂಷಣ, ವಾದ್ಯ ಪರಿಕರ ಸಹಾಯಧನ ನೀಡುವಿಕೆ ಮುಂದುವರಿಸಬೇಕು. ಆಯಾ ಜಿಲ್ಲೆಗಳಲ್ಲಿಯೇ ಗಿರಿಜನ ಬುಡಕಟ್ಟು ಉತ್ಸವ ನಡೆಸಬೇಕು. ಕಲಾವಿದರ ಮಾಸಾಶನ 5 ಸಾವಿರ ರೂ.ಗೆ ಹೆಚ್ಚಿಸಬೇಕು, ರಾಜಧಾನಿ ಬೆಂಗಳೂರಿನ ಲಾಲ್‌ಬಾಗ್ ಮತ್ತು ಕಬ್ಬನ್ ಪಾಕ್‌ನಲ್ಲಿನ ಸಂಧ್ಯಾರಾಗ ಮತ್ತು ಉದಯರಾಗ ಕಾರ್ಯಕ್ರಮ ಮುಂದುವರಿಸಬೇಕು, ಉಚಿತ ಬಸ್‌ಪಾಸ್ ನೀಡಬೇಕು, ಕಲಾವಿದರ ಮಕ್ಕಳಿಗೆ ಉಚಿತ ಶಿಕ್ಷಣ, ವಿದ್ಯಾರ್ಥಿ ವೇತನ ಮೊದಲಾದವನ್ನು ನೀಡಬೇಕೆಂದು ಕೋರಿದರು.

ಕಲಾವಿದರಾದ ದೇವು, ರಾಜಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net