ಕಲಾವಿದರು ನವರಸಗಳ ಅಭಿನಯಿಸುತ್ತಿಲ್ಲ : ರಂಗಾಯಣದ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ ಬೇಸರ

10
Published on

ಮೈಸೂರು: ನಾಟಕದಲ್ಲಿ ಓರ್ವ ಕಲಾವಿದ ನವರಸಗಳನ್ನು ತನ್ನ ಅಭಿನಯದ ಮೂಲಕ ಜನರಿಗೆ ತೋರಿಸಬೇಕು. ಆದರೆ ಇಲ್ಲಿಯವರೆಗೆ ದ್ವೇಷ ಮತ್ತು ಶೃಂಗಾರ ರಸಗಳನ್ನು ಮಾತ್ರ ಜನರಿಗೆ ಪರಿಚಯಿಸುತ್ತಿದ್ದು, ಉಳಿದ ರಸಗಳನ್ನು ಪರಿಚಯಿಸುತ್ತಿಲ್ಲ ಎಂದು ರಂಗಾಯಣದ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ ಬೇಸರ ವ್ಯಕ್ತಪಡಿಸಿದರು.

ರಂಗಯಾನ ಟ್ರಸ್ಟ್‌ನಿಂದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಮೂರು ದಿನ ಆಯೋಜಿಸಿದ್ದ ಡಾ.ಸುಜಾತಾ ಅಕ್ಕಿ ನಾಟಕೋತ್ಸವದ ಸಮಾರೋಪದಲ್ಲಿ ಭಾನುವಾರ ಭಾಗವಹಿಸಿ ಮಾತನಾಡಿದರು.

ನಾಟಕ ಎನ್ನುವುದು ಜನರಿಗೆ ಬಹಳ ಹತ್ತಿರವಾದದ್ದು. ಕಲಾವಿದ, ಪ್ರೇಕ್ಷಕ ಮುಖಾಮುಖಿ ಆಗುತ್ತಾನೆ. ನಾಟಕದಲ್ಲಿ ಓರ್ವ ಕಲಾವಿದ ನವರಸಗಳನ್ನು ತನ್ನ ಅಭಿನಯದ ಮೂಲಕ ಜನರಿಗೆ ತೋರಿಸಬೇಕು. ಆದರೆ ಈಗ ದ್ವೇಷ ಮತ್ತು ಶೃಂಗಾರ ರಸಗಳನ್ನು ಮಾತ್ರ ಜನರಿಗೆ ಪರಿಚಯಿಸಿದ್ದೇವೆ. ಉಳಿದ ರಸಗಳನ್ನು ಪರಿಚಯಿಸಿಲ್ಲ. ಇಂದು ಸಾಂಸ್ಕೃತಿಕ ಕ್ಷೇತ್ರದಲ್ಲೂ ಜಾತಿವಾದ ಆಕ್ರಮಿಸಿದೆ. ಇದನ್ನು ಮೀರಿದ ರಂಗಭೂಮಿ ಕಟ್ಟಾಬೇಕಾದುದು ನಮ್ಮೆಲ್ಲರ ಹೊಣೆ ಎಂದರು.

ರಾಜ್ಯದಲ್ಲಿ ರಂಗಾಯಣವನ್ನು ಈಗ ಆರು ಘಟಕಗಳನ್ನಾಗಿ ಮಾಡುವ ಮೂಲಕ ವಿಸ್ತರಿಸಲಾಗಿದೆ. ಅದರ ಜತೆಗೆ ಅಲೆಮಾರಿಗಳಿಗಾಗಿ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಎರಡು ಘಟಕಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ತ್ವರಿತವಾಗಿ ಮುಂದಾಗಬೇಕು ಎಂದು ಕೋರಿದರು.

ನಮ್ಮ ದೇಶದಲ್ಲಿ ಶಿವನ ಕುರಿತು ಅನೇಕ ಕಥೆಗಳು ಹುಟ್ಟಿಕೊಂಡಿದೆ. ಅದರ ಭಾಗವಾಗಿ ಚಾಮಚೆಲುವೆ ನೋಡಬಹುದು. ಅಲ್ಲದೆ ಬಿಳಿಗಿರಿ ರಂಗನಾಥ ಕುರಿತಾದ ಸೋಲಿಗರ ಬಾಲೆ ನಾಟಕ ಅದ್ಬುತವಾಗಿ ಮೂಡಿಬಂದಿದೆ. ಪುರಾಣದಲ್ಲೂ ಪ್ರಜಾಪ್ರಭುತ್ವಕ್ಕೆ ಹತ್ತಿರವಾದ ಕಥೆಗಳಿದ್ದರೆ ಅದನ್ನು ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಪದವಿವರೆಗಿನ ವಿದ್ಯಾರ್ಥಿಗಳಿಗೆ ಪಠ್ಯವನ್ನಾಗಿ ಇಡಬಹುದು ಎಂದು ಸಲಹೆ ನೀಡಿದರು.

ಡಾ.ಸುಜಾತಾ ಅಕ್ಕಿ ರಚಿತ ಚಾಮಚೆಲುವೆ ನಾಟಕ ನಂಜನಗೂಡು ನಂಜುಂಡ ಮತ್ತು ಚಾಮುಂಡಿ ಕುರಿತಾದ ಕಥೆ, ಇದರಲ್ಲಿ ಗಂಡ-ಹೆಂಡತಿ ಹಾಗೂ ಸವತಿ ನಡುವಿನ ಕಥೆಯಿದೆ. ಅಲ್ಲದೆ ದೊಂಬಿದಾಸರ ಕಥೆಗಳಲ್ಲಿ ಶಿವ-ಪಾರ್ವತಿ ಹಾಗೂ ಗಂಗೆಯ ಕಥೆ ಎಲ್ಲರೂ ಸಂಸಾರದ ಜಗಳವೇ ಆಗಿದೆ. ಹಾಗಾಗಿ ಈ ಕಥೆಗಳಲ್ಲಿ ಶಿವ ನ್ಯಾಯದ ಸ್ಥಾನದಲ್ಲಿರುತ್ತಾನೆ. ಗಂಗೆ ಮತ್ತು ಪಾರ್ವತಿ ಹೆಣ್ಣಿನ ಪಾತ್ರದಲ್ಲಿವೆ. ಈ ಕಥೆಗಳು ಸಾಮಾನ್ಯ ಜನರ ಬರುವ ಪಾತ್ರಗಳಾಗಿವೆ ಎಂದು ಬಣ್ಣಿಸಿದರು.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಈ ಕುಂಭ ಮೇಳಕ್ಕೆ ನಿತ್ಯ ಕೋಟ್ಯಂತರ ಜನರು ಹೋಗಿ ನದಿಯಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಅಂದರೆ ನಮ್ಮ ಜನರೆಲ್ಲಾ ಅಷ್ಟೊಂದು ಪಾಪ ಮಾಡಿದ್ದಾರಾ ಎನ್ನುವಂಥ ಅನೇಕ ಪ್ರಶ್ನೆಗಳು ಸಾಮಾನ್ಯರಲ್ಲಿ ಮೂಡುತ್ತವೆ. ಮೈಸೂರು ಜಿಲ್ಲೆ ತಿ.ನರಸೀಪುರದಲ್ಲೂ ರಾಜ್ಯ ಸರ್ಕಾರ ಕೋಟ್ಯಂತರ ರೂ.ವೆಚ್ಚದಲ್ಲಿ ಕುಂಭಮೇಳ ಆಯೋಜಿಸಿದೆ. ಇಲ್ಲಿಯೂ ಜನರ ಭಾವನೆ ಇರುವುದರಿಂದ ಇದರಲ್ಲಿ ತಪ್ಪಿಲ್ಲ ಎಂದರು.

ಮನಸ್ಸಿನಲ್ಲಿ ಇರುವ ಹುಳುಕು ಸರಿಪಡಿಸಬೇಕಾದರೆ, ನಾಟಕ, ಚಿತ್ರಕಲೆ, ಶಿಲ್ಪಕಲೆ ಸೇರಿದಂತೆ ಕಲಾಪ್ರಕಾರಗಳು ಮುಖ್ಯ. ನಮ್ಮ ಸಂವಿಧಾನ ವೈಚಾರಿಕತೆಯನ್ನು ಹೊಂದಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ವಿಧಾನ ಪರಿಷತ್ತಿನ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಒಬ್ಬ ವ್ಯಕ್ತಿಯ ಹೆಸರಿನಲ್ಲಿ ನಾಟಕೋತ್ಸವ ನಡೆಯುವುದು ಸಾಮಾನ್ಯ. ಆದರೆ ಓರ್ವ ಮಹಿಳೆ ಹೆಸರಿನಲ್ಲಿ ನಾಟಕೋತ್ಸವ ನಡೆಯುತ್ತಿರುವುದು ಅಭಿಮಾನ ಹಾಗೂ ಹೆಮ್ಮೆಯ ವಿಚಾರ ಎಂದರು.

ಜನಪದರು ಎಂದಿಗೂ ಜಾನಪದಕ್ಕೆ ಬೌದ್ಧಿಕ ಹಕ್ಕು ಸಾಮ್ಯತೆಗಾಗಿ ಹೊಡೆದಾಡಿದವರಲ್ಲ. ವಚನ ಸಾಹಿತ್ಯ, ದಾಸ ಸಾಹಿತ್ಯಕ್ಕೆ ಅಂಕಿತವಿದೆ. ಆದರೆ, ಜಾನಪದಕ್ಕೆ ಎಂದಿಗೂ ಅಂಕಿತ ಒತ್ತಿಲ್ಲ. ಜಾನಪದ ಕಥೆಗಳಿಗೆ ಹೊಸಹೊಸ ಸಂಗತಿಗಳನ್ನು ಸೇರಿಸಿಕೊಂಡು ಹೋಗಬೇಕು. ಅದು ಎಂದಿಗೂ ಸ್ಥಾಯಿಯಾಗಿ ನಿಲ್ಲುವುದಿಲ್ಲ ಎಂದರು.

ಡಾ.ಎ.ಶಿವರಾಜು ನಿರ್ದೇಶನದ ಕಾಯಕದ ಸತ್ಯಕ್ಕ, ಇಕ್ಕದ ಮಾರಯ್ಯ ಮತ್ತು ಕೊಡದ ಮಾರಿ ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಮನಗೆದ್ದವು. ಮೈಸೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಎನ್.ಎಸ್. ಗೋಪಿನಾಥ್, ನಾಟಕಕಾರರಾದ ಡಾ.ಸುಜಾತಾ ಅಕ್ಕಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net