ಮಂಗಳೂರು ಜೈಲಿನ ಗೋಡೆಗಳ ನಡುವೆ ಅರಳಿದ ಕಲಾ ಪ್ರತಿಭೆ

ಸುರೇಂದ್ರನ್ ರಚಿಸಿದ ಯಕ್ಷಗಾನ ವೇಷಧಾರಿಯ ಚಿತ್ರ
ಸುರೇಂದ್ರನ್ ರಚಿಸಿದ ಯಕ್ಷಗಾನ ವೇಷಧಾರಿಯ ಚಿತ್ರ
Published on
ಮಂಗಳೂರು: ಜೈಲು ಎಂದರೆ ಶಿಕ್ಷೆ, ನಿಬರ್ಂಧ ಮತ್ತು ಏಕಾಂತದ ಸಂಕೇತವೆಂದು ಭಾವಿಸಲಾಗುತ್ತದೆ. ಆದರೆ ಮಂಗಳೂರು ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬರು ತಮ್ಮ ಅದ್ಭುತ ಕಲಾ ಪ್ರತಿಭೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕಳೆದ ನಾಲ್ಕು ತಿಂಗಳ ಹಿಂದೆ ಕೌಟುಂಬಿಕ ವಿಚಾರದಲ್ಲಿ ತಪ್ಪೆಸಗಿ ಜೈಲು ಸೇರಿದ ಸುರೇಂದ್ರನ್ ಅವರ ಚಿತ್ರಕಲೆ ಇದೀಗ ಜೈಲಿನ ಸಿಬ್ಬಂದಿ ಹಾಗೂ ಭೇಟಿ ನೀಡುವವರ ಮೆಚ್ಚುಗೆಗೆ ಪಾತ್ರವಾಗಿದೆ. ಇವರಿಗೆ ಇನ್ನಿಬ್ಬರು ವಿಚಾರಣಾಧೀನ ಕೈದಿಗಳಾದ ವಿನೋಜ್ ಹಾಗೂ ಶಾಕೀರ್ ಸಹಕಾರ ನೀಡುತ್ತಿದ್ದಾರೆ.
ಸುರೇಂದ್ರನ್ ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿ, ಸ್ವಾತಂತ್ರೃ ಹೋರಾಟಗಾರ ಸುಭಾಷ್‌ಚಂದ್ರ ಬೋಸ್ ಸೇರಿದಂತೆ ಹಲವು ಮಹನೀಯರ ಚಿತ್ರಗಳನ್ನು ಅತ್ಯಂತ ನೈಪುಣ್ಯದಿಂದ ರಚಿಸಿದ್ದಾರೆ. ಅಲ್ಲದೆ ಕರಾವಳಿಯ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಯಕ್ಷಗಾನ ಹಾಗೂ ಕಂಬಳದ ದೃಶ್ಯಗಳನ್ನು ತಮ್ಮ ಕುಂಚದ ಮೂಲಕ ಜೀವಂತವಾಗಿ ಮೂಡಿಸಿದ್ದಾರೆ. ಅವರ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಬಣ್ಣಗಳ ಬಳಕೆ, ಮುಖಭಾವಗಳ ನೈಜತೆ ಹಾಗೂ ಕಲಾತ್ಮಕ ಸ್ಪರ್ಶ ನೋಡುಗರನ್ನು ಬೆರಗುಗೊಳಿಸುತ್ತಿದೆ.
ಹಾಡುಗಾರರೂ ಆಗಿರುವ ಜೈಲು ಅಧೀಕ್ಷಕ ಶರಣಬಸಪ್ಪ ಅವರು ಚಿತ್ರಕಲೆಗೆ ಅಗತ್ಯವಾದ ಬಣ್ಣ, ಬ್ರಶ್ ಹಾಗೂ ಇತರೆ ಸಾಮಗ್ರಿಗಳನ್ನು ಒದಗಿಸಿ ಪ್ರೋತ್ಸಾಹ ನೀಡಿದ್ದಾರೆ. ಇದರಿಂದ ಸುರೇಂದ್ರನ್ ಅವರಿಗೆ ತಮ್ಮ ಪ್ರತಿಭೆಯನ್ನು ಮತ್ತಷ್ಟು ಅಭಿವ್ಯಕ್ತಿಪಡಿಸಲು ಅವಕಾಶ ದೊರೆತಿದೆ.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಲ್ಲೊಂದು ವಿಶೇಷ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಬೆಳೆಸಿದರೆ ಅವರಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಕೈದಿಗಳ ಪುನರ್ವಸತಿಗೆ ಇಂತಹ ಚಟುವಟಿಕೆಗಳು ಸಹಕಾರಿ ಎಂಬ ಅಭಿಪ್ರಾಯವನ್ನು ಜೈಲು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಸುರೇಂದ್ರನ್ ಅವರ ಚಿತ್ರಗಳು ಕೇವಲ ಕಲಾಕೃತಿಗಳಷ್ಟೇ ಅಲ್ಲ, ಅವು ಜೀವನದಲ್ಲಿ ಬದಲಾವಣೆಯ ಸಾಧ್ಯತೆಗಳನ್ನು ತೋರಿಸುವ ಸಂದೇಶವೂ ಆಗಿವೆ. ಜೈಲಿನ ಗೋಡೆಗಳ ನಡುವೆಯೂ ಪ್ರತಿಭೆಗೆ ಅವಕಾಶ ದೊರೆತರೆ ಅದು ಹೇಗೆ ಅರಳಬಹುದು ಎಂಬುದಕ್ಕೆ ಈ ಕಲಾಕೃತಿಗಳು ಉದಾಹರಣೆಯಾಗಿದೆ.
ಜೈಲು ಯಾವುದೋ ಒಂದು ಪ್ರಕರಣದ ಆರೋಪಿ ಅಥವಾ ಅಪರಾಧಿಗಳ ಶಿಕ್ಷೆ ಅನುಭವಿಸುವ, ಮನ ಪರಿವರ್ತನೆ ಕೇಂದ್ರ ಎಂದೇ ಭಾವಿಸಲಾಗುತ್ತದೆ. ಈ ರೀತಿ ಅಪರಾಧ ಕೃತ್ಯಗಳಲ್ಲಿ ಜೈಲು ಸೇರುವ ಆರೋಪಿಗಳು ಅಥವಾ ಅಪರಾಧಿಗಳು ಬಹುತೇಕವಾಗಿ ತಮ್ಮ ಕಲಾ ಹವ್ಯಾಸಗಳಿಂದಲೂ ದೂರವಾಗಿಬಿಡುತ್ತಾರೆ. ಅದರಲ್ಲೂ ವಿಚಾರಣಾಧೀನ ಜೈಲುಗಳಲ್ಲಿ ಇಂತಹ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಸಂದರ್ಭ ವಿರಳ. ಆದರೆ ನಮ್ಮ ಮಂಗಳೂರಿನ ವಿಚಾರಣಾಧೀನ ಕೈದಿಗಳ ಜೈಲು ಮಾತ್ರ ಇದಕ್ಕೆ ಭಿನ್ನ.
‘ಕೇರಳ ಮೂಲದ ಸುರೇಂದ್ರನ್ ಜೈಲು ಸೇರಿದ ಮೇಲೆ ತುಂಬಾ ನಿರ್ಲಿಪ್ತನಾಗಿದ್ದ. ಯಾರಲ್ಲೂ ಮಾತನಾಡುತ್ತಿರಲಿಲ್ಲ. ಆತನನ್ನು ಕರೆದು ಮಾತನಾಡಿದಾಗ ಆತ ಹವ್ಯಾಸಿ ಕಲಾವಿದ ಎಂಬುದು ತಿಳಿಯಿತು. ಹಾಗಾಗಿ ಮೊದಲು ಆತನಿಗೆ ಕಾಗದದಲ್ಲಿ ಚಿತ್ರ ಬಿಡಿಸಲು ಹೇಳಿದಾಗ ಆತನ ಕಲಾಸಕ್ತಿ ಅಚ್ಚರಿ ಮೂಡಿಸಿತು. ಹಾಗಾಗಿ ಆತನಲ್ಲಿ ಗೋಡೆ ಮೇಲೆ ಮಹಾನ್ ಪುರುಷರ ಚಿತ್ರ ಬಿಡಿಸುವ ಬಗ್ಗೆ ಕೇಳಿದಾಗ ಆತ ಒಪ್ಪಿಕೊಂಡ. ಹಾಗಾಗಿ ಆತನಿಗೆ ಅಗತ್ಯ ಪೈಂಟ್ ಹಾಗೂ ಬ್ರಶ್ ನೀಡಿದ್ದು, ಕಳೆದ 10 ದಿನಗಳಲ್ಲಿ ಗೋಡೆ ಮೇಲೆ ಬೃಹದಾಕಾರದಲ್ಲಿ ಈ ಚಿತ್ರಗಳನ್ನು ಬಿಡಿಸಿದ್ದಾನೆ.’
*ಶರಣಬಸಪ್ಪ, ಅಧೀಕ್ಷಕರು, ಮಂಗಳೂರು ಕಾರಾಗೃಹ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net