ಆ.13ರಂದು ವಿದುಷಿ ಕಮಲಾ ಭಟ್‌ಗೆ ಗೌರವಾಭಿನಂದನೆ

Davangere World Dance Day
Published on

ಮಂಗಳೂರು: ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತೆ ಗುರು ವಿದುಷಿ ಕಮಲಾ ಭಟ್ ಅವರಿಗೆ ಗೌರವಾಭಿನಂದನಾ ಕಾರ್ಯಕ್ರಮ ಆ.13ರಂದು ಸಾಯಂಕಾಲ 4ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2020ರ ಸಾಲಿನಲ್ಲಿ ಕಮಲಾ ಭಟ್ ಅವರಿಗೆ ಕರ್ನಾಟಕ ಕಲಾಶ್ರೀ ಬಿರುದು ನೀಡಿ ಪುರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಅವರ ಶಿಷ್ಯವರ್ಗ ಹಾಗೂ ಅಭಿಮಾನಿಗಳು ‘ಸಾರ್ಥಕಂ’ ಎಂಬ ಅನ್ವರ್ಥನಾಮದಡಿ ಅಭಿನಂದಿಸಲು
ನಿರ್ಧರಿಸಿದ್ದೇವೆ ಎಂದು ಗೌರವಾಭಿನಂದನಾ ಸಮಿತಿಯ ಸದಸ್ಯ ಶ್ರೀಧರ ಹೊಳ್ಳ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಿರಿಯ ಶಿಷ್ಯೆಯರಾದ ಭರತಾಂಜಲಿ ಕೊಟ್ಟಾರದ ವಿದುಷಿ ಪ್ರತಿಮಾ ಶ್ರೀಧರ್, ನೃತ್ಯ ಸುಧಾ ಮೇರಿಹಿಲ್‌ನ ವಿದುಷಿ ಸೌಮ್ಯಾ ಸುಧೀಂದ್ರ ರಾವ್, ಬೆಂಗಳೂರು ಚಿಗುರು ನೃತ್ಯಾಲಯದ ವಿದುಷಿ ಸರಿತಾ ಎಸ್. ಕೊಟ್ಟಾರಿ, ಬೆಂಗಳೂರಿನ ಪ್ರಮೋದಾ ಭಟ್ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ ಎಂದರು.

ಮಂಗಳೂರು ವಿ.ವಿ. ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಕ್ಷೇತ್ರ ಕಟೀಲಿನ ಶ್ರೀಹರಿನಾರಾಯಣದಾಸ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಶಾಂತಲಾ ನಾಟ್ಯ ಪುರಸ್ಕೃತ ನಾಟ್ಯಾಚಾರ್ಯ ಗುರು ಉಳ್ಳಾಲ್ ಮೋಹನ್ ಕುಮಾರ್ ಶುಭ ಹಾರೈಸಲಿದ್ದಾರೆ. ಮೂಡುಬಿದಿರೆ ಎಕ್ಸಲೆಂಟ್ ಪ.ಪೂ. ಕಾಲೇಜು ಉಪನ್ಯಾಸಕ ಡಾ.ವಾದಿರಾಜ ಕಲ್ಲೂರಾಯ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಗೌರವಾಭಿನಂದನಾ ಸಮಿತಿಯ ಪ್ರಸನ್ನ, ಮಾಧವ ಜೋಗಿತ್ತಾಯ, ವಿದುಷಿ ಸೌಮ್ಯಾ ಸುಧೀಂದ್ರ, ಶೈಲಜಾ ಶ್ರೀಕಾಂತ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net