

ಮೈಸೂರು: ಪ್ರಸ್ತುತ ದಿನಗಳಲ್ಲಿ ಆಡಂಬರದ ಬದುಕಿಗೆ ಮಾರುಹೋಗಿ ಕುಟುಂಬದ ಪರಂಪರೆ, ಸಂತೋಷ ಇಲ್ಲದೆ ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ವಿಪರ್ಯಾಸ ಎಂದು ಕಲಾವಿದ ಶಿವರಾಜಿರಾವ್ ಜಾಧವ್ ಬೇಸರ ವ್ಯಕ್ತಪಡಿಸಿದರು.
ನಗರದ ಕೃಷ್ಣಮೂರ್ತಿಪುರಂ ಶ್ರೀರಾಮ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಚಿಂತನ-ಮಂಥನ ವೇದಿಕೆ ಉದ್ಘಾಟನೆ, ವಿಶೇಷ ಉಪನ್ಯಾಸ ಹಾಗೂ ಪ್ರತಿಭಾ ಪುರಷ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದೆ ಕೂಡು ಕುಟುಂಬ ಇತ್ತು. ಮನೆಯ ಊಟ, ನಾಟಿ ಔಷಧ, ಅಜ್ಜ, ಅಜ್ಜಿಯರ ಜತೆ ಸಂತೋಷದ ಅನುಭವವನ್ನು ಹಂಚಿಕೊಂಡು ಬದುಕುತ್ತಿದ್ದೆವು. ಆದರೆ ಆಧುನಿಕತೆಯಲ್ಲಿ ಆಡಂಬರದ ಜೀವನ, ಏಕಾಂತತೆ ಎನ್ನುವ ಹೆಸರಿನಲ್ಲಿ ಹಿಂದಿನ ಸಂತೋಷವನ್ನು ಬಿಟ್ಟು ಹಿರಿಯರನ್ನು ವೃದ್ಧಾಶ್ರಮಗಳಿಗೆ ಸೇರಿಸಲಾಗುತ್ತಿದೆ. ಇಂತಹ ಪರಿಸ್ಥಿತಿ ಬದಲಾಗಬೇಕು ಎಂದು ಹೇಳಿದರು.
ವಿದ್ಯೆಯನ್ನು ಶ್ರದ್ಧೆ, ಭಕ್ತಿಯಿಂದ ಕಲಿಕೆಯಲಾಗುತ್ತಿತ್ತು. ಹೀಗಾಗಿ ಭಾಷೆ ಮೇಲೆ ಹಿಡಿತ ಇತ್ತು. ರಂಗಭೂಮಿ ಶುದ್ಧವಾದ ಕನ್ನಡ ಭಾಷೆಯನ್ನು ಕಲಿಸಿದೆ. ಅಭಿನಯದ ಮೂಲಕ ಸ್ಪಷ್ಟವಾದ ಮಾತುಗಳನ್ನಾಡುವುದರಿಂದಲೇ ನಟನಾಗಲು, ಹೃದಯವಂತನಾಗಲೂ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಮೃದ್ಧ ಜೀವನಕ್ಕೆ ಸದೃಢ ಮನಸ್ಸು ಕುರಿತು ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ಪೊಲೀಸ್ ಅಕಾಡೆಮಿಯ ಮನಶಾಸ್ತ್ರ ಉಪನ್ಯಾಸಕ ಡಾ.ಡಿ.ಚಂದ್ರಶೇಖರ್, ಮಾನಸಿಕ ಒತ್ತಡಗಳಿಂದ ಹೃದಯಾಘಾತಗಳು ಹೆಚ್ಚುತ್ತಿವೆ. ಇದನ್ನು ತಡೆಯಲು ಮನಸ್ಸನ್ನು ಹತೋಟಿಯಲ್ಲಿಡಬೇಕು. ಗಾಬರಿಯಾಗುವುದು ಒಳ್ಳೆಯ ಬೆಳವಣಿಗೆಯಲ್ಲ, ಒತ್ತಡವನ್ನು ನಿವಾರಣೆ ಮಾಡಿಕೊಳ್ಳಲು ಜೀವನಶೈಲಿ ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಊಟ, ನಿದ್ರೆ, ಸಹವಾಸ ಇವು ಹೆಚ್ಚು ಪರಿಣಾಮವನ್ನು ಮನಸ್ಸಿನ ಮೇಲೆ ಬೀರುತ್ತವೆ. ಪರಿಣಾಮಕಾರಿಯಾಗಿ ಬದುಕಬೇಕಾದರೆ ಸಮಸ್ಯೆಗಳು ಇರಬೇಕು. ಸಮಸ್ಯೆಗಳೇ ಜೀವನವಲ್ಲ, ಆ ಎಲ್ಲ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸಿ ಜೀವನವನ್ನು ಯಶಸ್ಸಿನ ಹಾದಿಯಲ್ಲಿ ನಡೆಸಬೇಕು. ತಾಳ್ಮೆ ಮತ್ತು ಜಾಗೃತಿ ಬಹಳ ಮುಖ್ಯ ಎಂದು ಹೇಳಿದರು.
ಪ್ರಸ್ತುತ ದಿನಗಳಲ್ಲಿ ಒತ್ತಡದ ಬದುಕಿನಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬರಿಗೆ ಸಾವಿನ ಬಗ್ಗೆ ಭೀತಿ ಉಂಟಾಗುತ್ತಿರುವುದನ್ನು ಮನೋಚಿಕಿತ್ಸೆಯಲ್ಲಿ ಗಮನಿಸುತ್ತಿದ್ದೇವೆ. ಪ್ರತಿ ದಿನವೂ ಒಬ್ಬ ಮನುಷ್ಯನಿಗೆ 40 ಸಾವಿರ ಆಲೋಚನೆಗಳು ಬರಬಹುದಾಗಿದ್ದು, ಭಾವನೆಗಳನ್ನು ಒಳ್ಳೆಯದನ್ನಾಗಿ ಸ್ವೀಕರಿಸಿ ಮನಸ್ಸನ್ನು ಹಗುರ ಮಾಡಿಕೊಳ್ಳುವುದು ಆರೋಗ್ಯಕರ ಲಕ್ಷಣ. ಜಗತ್ತು ಇಂದು ಸಂಶೋಧನೆ ಮಾಡುತ್ತಿರುವುದು ಭಾವನೆಗಳ ಮೇಲೆ. ಸೌಂದರ್ಯವನ್ನು ಸವಿಯುತ್ತಿಲ್ಲ. ಸೆರೆ ಹಿಡಿಯುವ ಪ್ರಯತ್ನ ಮಾಡುತ್ತಿದ್ದೇವೆ. ಇದರಿಂದ ಹೆಚ್ಚು ಅನಾಹುತಗಳು ಆಗುತ್ತಿವೆ ಎಂದು ತಿಳಿಸಿದರು.
ರಂಗ ಕಲಾವಿದ ಎನ್.ಹರೀಶ್, ವೇದಿಕೆ ಗೌರವಾನ್ವಿತ ಅಧ್ಯಕ್ಷ ಪಿ.ಎಸ್.ರಾಜಶೇಖರಮೂರ್ತಿ. ಪ್ರಾಧ್ಯಾಪಕ ಎನ್.ಧನಂಜಯ, ಉಪನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲಗೆರೆ, ಬನುಮಯ್ಯ ಸಂಜೆ ಕಾಲೇಜಿನ ಪ್ರಾಂಶುಪಾಲ ಹುನಗನಹಳ್ಳಿ ಸುರೇಶ್ ಇತರರು ಇದ್ದರು.
ದ್ವೀತಿಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಜಿ.ಪಿ.ಮಹದೇವಪ್ರಸಾದ್, ಎನ್.ಮೌಲ್ಯಾ, ವಿ.ಇ.ಕಿರಣ್‌ಕುಮಾರ್ , ನಿತ್ಯಾಂಜಲಿ, ಎಚ್.ವಿ.ಲಿಖಿತಾ, ಮನ್ವಿತಾ ಅವರನ್ನು ಪುರಸ್ಕರಿಸಲಾಯಿತು.