

ಹುಬ್ಬಳ್ಳಿ : ಇಲ್ಲಿನ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಸಂಸ್ಥಾಪಕಿ ಡಾ. ಸಹನಾ ಭಟ್ಟ ಅವರ ಶಿಷ್ಯೆ, ವಿದುಷಿ ಕೃತಿ ಆನೆಗುಂದಿ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವನ್ನು ಜು. 30ರಂದು ಸಂಜೆ 5 ಗಂಟೆಗೆ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ, ಡಾ. ಎ.ಎಂ. ಆನೆಗುಂದಿ ಉದ್ಘಾಟಿಸುವರು. ರತ್ನಮಾಲಾ ದೇಸಾಯಿ, ರಜನೀಶ ಬಾಲಿ, ಬಾಬುರಾವ ಘಮಟಸಾಲಾ, ಸಾಧನಾ, ಹೇಮಾ ಆಕಳವಾಡಿ, ವಿದ್ವಾನ್ ಉನ್ನತ ಜೈನ್, ಪಿ.ವಿ. ಗೋವಿಂದರಾಜ್, ಎಂ.ಕೆ. ರವೀಂದ್ರ ಅವರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.
ಪ್ರದೀಪ ಭಟ್ಟ ಅವರು ರಚಿಸಿದ ಯಾಜ್ಞಸೇನೆ ನೃತ್ಯ ರೂಪಕವನ್ನು ಕಲಾವಿದೆ ಕೃತಿ ಪ್ರದರ್ಶಿಸಲಿದ್ದಾಳೆ. ಹಿಮ್ಮೇಳದಲ್ಲಿ ಸಹನಾ ಭಟ್ಟ, ಬಾಲಸುಬ್ರಹ್ಮಣ್ಯ ಶರ್ವ, ಪ್ರಸನ್ನ, ಪಂಚಮ ಉಪಾಧ್ಯಾಯ ಸಾಥ್ ನೀಡಲಿದ್ದಾರೆ. ಭರತನಾಟ್ಯ ಕಲಾವಿದೆ, ಗುರು ಡಾ. ಸಹನಾ ಭಟ್ಟ ಅವರ ನಿರ್ದೇಶನದಲ್ಲಿ ಈ ಕಾರ್ಯಕ್ರಮ ಮೂಡಿಬರಲಿದೆ ಎಂದರು.
ಉದ್ಯಮಿ ವೆಂಕಟೇಶ ಆನೆಗುಂದಿ ಸುದ್ದಿಗೋಷ್ಠಿಯಲ್ಲಿ ಇದ್ದರು.