ಹಳ್ಳಿಹೊಳೆ: ಇದು ಚಿತ್ತಾರ ಹಳ್ಳಿಹೊಳೆ ಕಲಾವಿದರ ಕೈಚಳಕ! ರಸ್ತೆ ಬದಿಯಲ್ಲಿ ನಿರುಪಯುಕ್ತವಾಗಿ ಬಿದ್ದಿದ್ದ ಕಾಡು ಕಲ್ಲಿಗೆ ಜೀವ ತುಂಬುವ ಮೂಲಕ ಎಲ್ಲರ ಚಿತ್ತ ಸೆಳೆಯುವಂತೆ ಮಾಡಿದ್ದಾರೆ.
ಕಮಲಶಿಲೆ- ಹಳ್ಳಿಹೊಳೆ ಊರುಗಳ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಇದ್ದ ಕಾಡುಕಲ್ಲಿಗೆ ಕಲಾವಿದರು ಹೊಸ ವರ್ಷಕ್ಕೆ ಹೊಸ ರೂಪ ನೀಡಿದ್ದು, ಈಗ ಈ ಕಲ್ಲರಳಿ ಕಪ್ಪೆಯೊಂದು ಮಂದಹಾಸ ಬೀರುತ್ತಿದೆ. ಕಲಾವಿದ ಚೇತನ್ ಕುಮಾರ್ ಮತ್ತು ಅಭಿಷೇಕ್ ಬಂಡೆಗೆ ಜೀವ ತುಂಬಿ ಪ್ರೇಕ್ಷಕರನ್ನು ವಿಸ್ಮಯಗೊಳಿಸಿದ್ದಾರೆ.
ಹಳ್ಳಿಹೊಳೆಯಲ್ಲಿ ಒಂದು ಶಿಲ್ಪಕಲಾಕೃತಿ ರಚಿಸಲು ಆಲೋಚಿಸುತ್ತಿರುವಾಗ ಈ ಕಲ್ಲು ಗೋಚರಕ್ಕೆ ಬಂತು. ಅರಣ್ಯ ಇಲಾಖೆಯವರಿಂದಲೂ ಒಪ್ಪಿಗೆ ಪಡೆದು, ಕಲ್ಲಿಗೆ ಆಕೃತಿ ನೀಡಿದ್ದೇವೆ. ಹೊಸ ವರ್ಷಕ್ಕೆ ಎಲ್ಲರೂ ನೋಡುವಂತೆ ಮಾಡಿದ್ದೇವೆ ಎಂದು ಕಲಾವಿದ ಚೇತನ್ ಕುಮಾರ್ ಹಳ್ಳಿಹೊಳೆ ವಿಜಯವಾಣಿಗೆ ತಿಳಿಸಿದ್ದಾರೆ.
ಚೇತನ್ ಕುಮಾರ್ ಮೂಡುಬಿದಿರೆಯ ಕಾಲೇಜಿನಲ್ಲಿ ಕಲಾವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾಲೇಜು ಬಂದಾಗಿದ್ದರಿಂದ ಹಳ್ಳಿಹೊಳೆಯಲ್ಲಿ ಆರ್ಟ್ ಗ್ಯಾಲರಿ ತೆರೆದು ಹತ್ತಾರು ಕಲಾವಿದರಿಗೆ ಕೆಲಸ ನೀಡಿದ್ದಾರೆ. ಚೇತನ್‌ಕುಮಾರ್ ಕಲಾಸಾಧನೆ ಬಗ್ಗೆ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು.