ಮಾನವೀಯ ಸೇವೆಗೆ ಮಜೇಥಿಯಾ ಮಾದರಿ, ಡಾ. ಶ್ರೀಧರ ದಂಡಪ್ಪನವರ ಅಭಿಮತ

IMG-20240617-WA0000.jpg
Published on

ಹುಬ್ಬಳ್ಳಿ: ಅಪಘಾತ ಅಥವಾ ಇನ್ನಾವುದೇ ವೈದ್ಯಕಿಯ ಕಾರಣಗಳಿಂದಾಗಿ ಕೈ-ಕಾಲುಗಳನ್ನು ಕಳೆದುಕೊಂಡವರಿಗೆ ಇಲ್ಲಿಯ ಮಜೇಥಿಯಾ ಫೌಂಡೇಷನ್ ವತಿಯಿಂದ ಕೃತಕ ಕೈಕಾಲು ಜೋಡಣೆ ಮಾಡುವ ಸಲುವಾಗಿ ಭಾನುವಾರ ಮೂರುಸಾವಿರ ಮಠದ ಸಭಾಭವನದಲ್ಲಿ ಅಳತೆ ತೆಗೆದುಕೊಳ್ಳಲಾಯಿತು.

ಸುಮಾರು 85 ಜನರು ತಮಗೆ ಬೇಕಾದ ಕೈ ಕಾಲಿನ ಕುರಿತು ಅಳತೆ ನೀಡಿದರು. ಹುಬ್ಬಳ್ಳಿಯ "ಯುವರ್ ಫುಟ್ ಇನ್ ಯುವರ್ ವೇಯ್ಸ್' ಸಂಸ್ಥೆಯ ಮುಖ್ಯಸ್ಥ ಶಂಕರ ಕಾಮಟೆ ಹಾಗೂ ಸಂಗಡಿಗರು ಕೈಕಾಲುಗಳ ಅಳತೆ ತೆಗೆದುಕೊಂಡರು.

ಈ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿ ಶ್ರೀಧರ ದಂಡಪ್ಪನವರ ಮಾತನಾಡಿ, ಮಜೇಥಿಯಾ ಫೌಂಡೇಷನ್ ಅತ್ಯುತ್ತಮ ಸಮಾಜ ಸೇವೆಯಲ್ಲಿ ತೊಡಗಿದೆ. ದಿವ್ಯಾಂಗರು, ವಿಕಲಾಂಗರು, ಬಡ ಜನರ ಬಗ್ಗೆ ಅತಿಯಾದ ಕಾಳಜಿ ಹೊಂದಿದೆ. ಇಂತಹ ಸೇವೆಯಿಂದಾಗಿ ಜಿತೇಂದ್ರ ಮಜೇಥಿಯಾ ಅವರು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ ಎಂದರು.

ಕೈಕಾಲು ಕಳೆದುಕೊಂಡವರು ತಮ್ಮ ಬದುಕಿನಲ್ಲಿ ತುಂಬಾ ಕಷ್ಟ ಅನುಭವಿಸುತ್ತಾರೆ. ಪರಾಲಂಬಿಯಾಗಿ ಬಿಡುತ್ತಾರೆ. ಅಂಥವರನ್ನು ಕಂಡ ಮಜೇಥಿಯಾ ಅವರು ಬೇರೆಯವರ ಮೇಲೆ ಯಾರೂ ಅವಲಂಬಿತರಾಗಿರಬಾರದು ಎಂಬ ನಿಟ್ಟಿನಲ್ಲಿ ಕೃತಕ ಕೈಕಾಲು ಜೋಡಣೆ ಮಾಡಿಸುವ ಮೂಲಕ ಅಂಗವಿಕಲರ ಬಾಳಿಗೆ ಜ್ಯೋತಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಮಾತನಾಡಿ, ಬಡವರು, ಅಂಗವಿಕಲರಿಗಾಗಿ ಫೌಂಡೇಷನ್ ಸದಾ ಸೇವೆ ಮಾಡಲಿದೆ. ಸಂಸ್ಥೆಯಿಂದ ಸಮಾಜ ಸೇವೆ ಮಾಡಲು ಜನರ ಸಹಕಾರವೂ ನಮಗೆ ಅತ್ಯಮೂಲ್ಯವಾಗಿದೆ. ಜನರು ಕೊಟ್ಟಂತಹ ಪ್ರೀತಿ, ವಿಶ್ವಾಸ, ಆಶೀರ್ವಾದದಿಂದ ಹೆಚ್ಚಿನ ಸೇವೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಮಜೇಥಿಯಾ ಅವರು ಮಾಡುತ್ತಿರುವ ಸೇವೆ ಅರ್ಥರ್ಪೂಣವಾಗಿದ್ದು, ಅವರ ಸೇವೆ ಇತರರಿಗೆ ಮಾದರಿಯಾಗಿದೆ ಎಂದರು.

ಅನ್ವರ ಮುಧೋಳ, ಡಾ. ಕೆ. ರಮೇಶಬಾಬು, ಕಶ್ಯಪ್ ಮಜೇಥಿಯಾ, ಡಾ. ಜ್ಯೋತಿ ಕಾಚಾಪುರ, ಡಾ. ವಿ.ಬಿ. ನಿಟಾಲಿ, ಎಚ್.ಆರ್. ಪ್ರಹ್ಲಾದರಾವ್, ಅಮೃತಭಾಯ್ ಪಟೇಲ, ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ದಯಾ ಪಟೇಲ್ ಉಪಸ್ಥಿತರಿದ್ದರು.

ಸುನೀಲ ಕುಕ್ಕನೂರ ಸ್ವಾಗತಿಸಿದರು. ರೇಖಾ ಆಪ್ಟೆ ಕಾರ್ಯಕ್ರಮ ನಿರೂಪಿಸಿದರು. ನವೀನ ಮಾಲಿನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net