

ವಿಜಯವಾಣಿ ಸುದ್ದಿಜಾಲ ಉಡುಪಿ
ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಸಹ ಶಿಕ್ಷಕರಿಗೆ ಪರ್ಯಾಯವಾಗಿ ಬೇರಾವ ವ್ಯವಸ್ಥೆಯೂ ತರಗತಿಯ ಕೋಣೆ ಆಕ್ರಮಿಸಲು ಸಾಧ್ಯವಿಲ್ಲ. ಹೀಗಾಗಿ ಶಿಕ್ಷಕರಿಗೆ ಲಭ್ಯವಾಗುವ ಅತ್ಯುನ್ನತ ಸಹಾಯಕನನ್ನಾಗಿ ನಾವು ಕೃತಕ ಬುದ್ಧಿಮತ್ತೆ (ಎಐ)ಯ ತಂತ್ರಜ್ಞಾನ ಬಳಸಿಕೊಳ್ಳಬಹುದಾಗಿದೆ ಎಂದು ಖ್ಯಾತ ಸಂಶೋಧಕ, ವಿಜ್ಞಾನ ಲೇಖಕ ಎಎಸ್ಕೆವಿಎಸ್ ಶರ್ಮ ಕೊಳ್ಳೇಗಾಲ ಅಭಿಪ್ರಾಯಪಟ್ಟರು.
ಉಡುಪಿಯ ಒಳಕಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ವತಿಯಿಂದ ಪ್ರೌಢಶಾಲಾ ಸಹಶಿಕ್ಷಕರಿಗಾಗಿ ಏ.5ರಂದು ಆಯೋಜಿಸಿದ್ದ ತರಗತಿ ಕೋಣೆಯಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಬಳಕೆ ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಡಯಟ್ ಪ್ರಾಂಶುಪಾಲ ಡಾ. ಅಶೋಕ ಕಾಮತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣದಲ್ಲಿ ಯಾಂತ್ರಿಕ ಸೌಲಭ್ಯದಿಂದ ಸಮಯ ಪಾಲನೆ ಹಾಗೂ ಸಮಯ ಉಳಿತಾಯ ಎರಡೂ ಸಾಧ್ಯವಿದೆ ಎಂದರು.
ಕಾರ್ಯಾಗಾರದಲ್ಲಿ ಉಡುಪಿ ಜಿಲ್ಲೆಯ ಐದು ವಲಯಗಳಿಂದ 50 ಶಿಕ್ಷಕರು ಪಾಲ್ಗೊಂಡಿದ್ದರು. ಶೆಟ್ಟಿಬೆಟ್ಟು ಶಾಲೆಯ ಶಿಕ್ಷಕ ಸಂದೀಪ ಸ್ವಾಗತಿಸಿದರು. ವಳಕಾಡು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪೂರ್ಣಿಮಾ ವಂದಿಸಿದರು.