ಆಗಸ್ಟ್​ 26ರಂದು ಕೃತಕ ಬುದ್ಧಿಮತ್ತೆಯ ಘಟಕ ಉದ್ಘಾಟನೆ...

Manipal
Published on

ಎಂಎಸ್​ಡಿಸಿ ಅಧ್ಯಕ್ಷ ಬ್ರಿಗೇಡಿಯರ್​ (ಡಾ.) ಸುರ್ಜಿತ್​ ಪಾಬ್ಲಾ ಮಾಹಿತಿ

ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ಎಐ ವಾಹನ ಮೂಲಕ ಜಾಗೃತಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಕೃತಕ ಬುದ್ಧಿಮತ್ತೆ (ಎಐ)ಯು ಭವಿಷ್ಯದ ತಂತ್ರಜ್ಞಾನ ಹಾಗೂ ನೂತನ ಕೌಶಲವಾಗಿದೆ. ಮುಂದಿನ ದಿನಗಳಲ್ಲಿ ವಿಶ್ವದಲ್ಲಿಯೇ ಎಐಗೆ ಅಪಾರ ಮನ್ನಣೆ ಲಭಿಸಲಿದೆ. ಹೀಗಾಗಿ ಅದಕ್ಕೆ ಪೂರಕವಾದ ವಿವಿಧ ಕೋರ್ಸ್​ಗಳನ್ನು ಮಣಿಪಾಲ ಸ್ಕಿಲ್​ ಡೆವೆಲಪ್​ಮೆಂಟ್​ ಸೆಂಟರ್​ನ ಆರಂಭಿಸಲಾಗಿದೆ. ಆ.26ರಂದು ಬೆಳಗ್ಗೆ 10 ಗಂಟೆಗೆ ಟಿಎಂಎ ಪೈ ಪಾಲಿಟೆಕ್ನಿಕ್​ ಆಡಿಟೋರಿಯಂನಲ್ಲಿ ಎಐಸಿಟಿಇ ಅಧ್ಯಕ್ಷ ಪ್ರೊ (ಡಾ.) ಟಿ.ಜಿ. ಸೀತಾರಾಂ ಅವರು ಕೃತಕ ಬುದ್ಧಿಮತ್ತೆ (ಎಐ) ಶ್ರೇಷ್ಠತಾ ಘಟಕವನ್ನು ಉದ್ಘಾಟಿಸಲಿದ್ದಾರೆ ಎಂದು ಎಂಎಸ್​ಡಿಸಿ ಅಧ್ಯಕ್ಷ ಬ್ರಿಗೇಡಿಯರ್​ (ಡಾ.) ಸುರ್ಜಿತ್​ ಪಾಬ್ಲಾ ಮಾಹಿತಿ ನೀಡಿದರು.

ಉಡುಪಿಯ ಪ್ರೆಸ್​ಕ್ಲಬ್​ನಲ್ಲಿ ಆಗಸ್ಟ್​ 23ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಸನ್​ ಡಿಜಿಟಲ್​ ಇಂಡಿಯಾ, ಇನ್​ಟೆಕ್​ ಹಾಗೂ ಗ್ಲೋಬಲ್​ ಎಐ ಸೊಸೈಟಿ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಇಂಟೆಲ್​ ಏಷ್ಯಾ ಫೆಸಿಫಿಕ್​ನ ಉಪಾಧ್ಯಕ್ಷ ಡಾ. ಸಿಯಾನ್​ ಬೂನ್​ ನ್ಗೂ, ಕ್ಯಾಲಿಫೋರ್ನಿಯದ ಯುನಿವರ್ಸಿಟಿ ಆಫ್​ ಸೌಥರ್ನ್​ನ ಪ್ರಮುಖ ಪ್ರೊ. (ಡಾ.)ಉಂಬೆರ್ಟೋ ಸುಲ್ಪಾಸ್ಸೋ, ಏಷ್ಯಾ ಎಐ ಅಸೋಸಿಯೇಷನ್​ ಅಧ್ಯಕ್ಷ ಡಾ. ಎಲ್​.ಕ್ವಾನ್​ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.

ಎಐ ವಾಹನಕ್ಕೆ ಸಿಎಂ ಚಾಲನೆ

Manipal 2
ವಿಸನ್​ ಡಿಜಿಟಲ್​ ಇಂಡಿಯಾದ ಸಂಸ್ಥಾಪಕ ಡಾ. ಹರಿಕೃಷ್ಣ ಮಾರಮ್​ ಮಾತನಾಡಿ, ಮುಂದಿನ ದಿನಗಳಲ್ಲಿ ಭವಿಷ್ಯವೇ ಎಐ ಆಗಿರಲಿದೆ. ಅದನ್ನು ಬಳಕೆ ಮಾಡಿಕೊಳ್ಳದಿದ್ದಲ್ಲಿ ಅದ್ಭುತ ಜ್ಞಾನದಿಂದ ಹಾಗೂ ನಾಯತ್ವವನ್ನು ಕಳೆದುಕೊಳ್ಳಲಿದ್ದೇವೆ. ಈ ಜ್ಞಾನವು ಕಲಿಕೆಯವ ವೇಗವನ್ನು ಹೆಚ್ಚಿಸಲಿದೆ. ವಿಶ್ವದಲ್ಲಿಯೇ ಪ್ರಥಮ ಬಾರಿಗೆ ಎಐ ಯಂತ್ರವನ್ನು ವಾಹನದಲ್ಲಿ ಅಳವಡಿಸಿ ಶಾಲಾ-ಕಾಲೇಜುಗಳಿಗೆ ತೆರಳಿ ಉಚಿತವಾಗಿ ಈ ಜ್ಞಾನದ ಮಾಹಿತಿ ಒದಗಿಸಲಿದ್ದೇವೆ. ರಾಜ್ಯ ಸರ್ಕಾರವೂ ಸಹ ಇದಕ್ಕೆ ಪ್ರೋತ್ಸಾಹ ನೀಡಿದ್ದು, ಆ.26ರಂದು ಬೆಂಗಳೂರಿನ ವಿಧಾನಸೌಧದ ಬಳಿ ಎಐ ಜಾಗೃತಿ ವಾಹನಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಐಟಿ ಸಚಿವ ಪ್ರಿಯಾಂಕ ಖರ್ಗೆ ಚಾಲನೆ ನೀಡಲಿದ್ದಾರೆ. ಎಐ ತಂತ್ರಜ್ಞಾನದ ಸಮರ್ಪಕ ಬಳಕೆಯಿಂದಾಗಿ 2047ಕ್ಕೆ ಭಾರತವು ವಿಶ್ವ ನಾಯಕತ್ವ ವಹಿಸಿಕೊಳ್ಳಲಿದೆ ಎಂದರು.

ಉಡುಪಿ ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲು ಬಳಸಲಿರುವ ಎಐ ಟೆನರ್​ ಯಂತ್ರವನ್ನು ಪ್ರದರ್ಶಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ಐಟಿ ಸ್ಕಿಲ್​ನ ಎಚ್​ಒಡಿ ರಾಜಲಕ್ಷ್ಮೀ ಆನಂದ, ಎಂಎಸ್​ಡಿಸಿ ರಿಜಿಸ್ಟ್ರಾರ್​ ಡಾ. ಅಂಜಯ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net