

ಹುಬ್ಬಳ್ಳಿ: ತಂತ್ರಜ್ಞಾನದಿಂದ ಜಗತ್ತು ಚಿಕ್ಕದಾಗಿದೆ. ಈಗಿನ ಮಕ್ಕಳಿಗೆ ಸಾಮಾಜಿಕ, ಭಾವನಾತ್ಮಕ, ಬುದ್ಧಿವಂತಿಕೆ ತುಂಬ ಮುಖ್ಯ. ಇದರಿಂದ ವೈಯಕ್ತಿಕ ಸಂಬಂಧ ಬೆಳೆಯಲು ಸಹಕಾರಿ ಎಂದು ನೈಋತ್ಯ ರೈಲ್ವೆ ವಲಯ ಅಧಿಕಾರಿ ಸಂತೋಷ ಹೆಗಡೆ ಹೇಳಿದರು.
ಹುಬ್ಬಳ್ಳಿ-ಧಾರವಾಡ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಗರದ ಲೋಕಮಾನ್ಯ ತಿಲಕ ರಸ್ತೆಯ ಹವ್ಯಕ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಹವ್ಯಕ ಹಬ್ಬ-ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಅತಿಥಿಗಳಾಗಿ ಮಾತನಾಡಿದರು.
ಇತ್ತೀಚೆಗೆ ಬಂದಿರುವ ಕೃತಕ ಬುದ್ಧಿಮತ್ತೆಯು ನಮ್ಮ ನಿಯಂತ್ರಣವನ್ನು ಒತ್ತುವರಿ ಮಾಡಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಸೆನ್ಸಾರ್ ಮೂಲಕ ಕೃತಕ ಬುದ್ಧಿಮತ್ತೆ ನಮ್ಮ ನಿರ್ಧಾರಗಳನ್ನು ನಿರ್ಧರಿಸುವ ಶಕ್ತಿಯನ್ನು ಹೊಂದಲಿದೆ. ಭಾಷಾ ಕೌಶಲ ಇರುವುದರಿಂದ ಮನುಷ್ಯ ಇಷ್ಟು ಮುಂದುವರಿದಿದ್ದಾನೆ. ಆ ಭಾಷಾ ಕೌಶಲವನ್ನು ಇದೀಗ ಕೃತಕ ಬುದ್ಧಿಮತ್ತೆ ಅತಿಕ್ರಮಿಸಿಕೊಂಡಿದೆ ಎಂದರು.
ಹವ್ಯಕ ಸಮಾಜದ ಭಾಷೆ, ಆಚಾರ-ವಿಚಾರಗಳು ಹಾಗೂ ಸಂಸ್ಕೃತಿ-ಸಂಪ್ರದಾಯಗಳನ್ನು ಅರಿಯಲು ಹವ್ಯಕ ಹಬ್ಬದಂಥ ಕಾರ್ಯಕ್ರಮಗಳು ಸಹಕಾರಿ. ಪ್ರತಿ ವರ್ಷವೂ ಹವ್ಯಕ ಸಮಾಜದವರೆಲ್ಲರೂ ಸೇರಿ ಹವ್ಯಕ ಹಬ್ಬ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳುತ್ತ ಬರುತ್ತಿರುವುದು ಮಾದರಿ ಕಾರ್ಯ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಹವ್ಯಕ ಸಮಾಜವು ಜನಸಂಖ್ಯೆಯ ದೃಷ್ಟಿಯಿಂದ ಬಹಳ ಕಡಿಮೆ ಇದ್ದರೂ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡುವ ಮೂಲಕ ಮಾದರಿಯಾಗಿದೆ ಎಂದರು.
ಹವ್ಯಕ ಸಂಸ್ಥೆಯ ಅಧ್ಯಕ್ಷ ವಿ.ಎಂ. ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಕ್ಕೆ ಸಮಾಜದ ಸದಸ್ಯರೇ ಬೆನ್ನೆಲುಬು. ಸಂಘದ ಸಭಾಭವನದ ಅಭಿವೃದ್ಧಿ ಕಾರ್ಯಕ್ಕೆ ಸಹಾಯಧನದ ಅಗತ್ಯವಿದೆ. ಸಮಾಜ ಬಾಂಧವರು ಕೈಜೋಡಿಸಿದಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಮಾದರಿ ಸಮುದಾಯ ಭವನ ನಿರ್ವಣವಾಗಲಿದೆ ಎಂದರು.
ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಉನ್ನತ ಶಿಕ್ಷಣ, ಪತ್ರಿಕೋದ್ಯಮ, ವೈದ್ಯಕೀಯ ಹಾಗೂ ಯಕ್ಷಗಾನ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಸ್ವರ್ಣವಲ್ಲಿ ಶ್ರೀಗಳು ಕಳುಹಿಸಿದ ಸಂದೇಶವನ್ನು ಸಂಘದ ಕಾರ್ಯಾದರ್ಶಿ ಸುದರ್ಶನ ಹೇಮಾದ್ರಿ ಓದಿದರು.
ಹಿಂದುಸ್ತಾನಿ ಗಾಯಕರಾದ ಪಂ. ಗಣಪತಿ ಭಟ್ಟ ಹಾಸಣಗಿ, ಸಂಗೀತಾ ಹೆಗಡೆ, ತಬಲಾ ವಾದಕರಾದ ಪಂ.ಗೋಪಾಲಕೃಷ್ಣ ಹೆಗಡೆ, ರಾಜೇಶ್ವರಿ ಭಟ್, ವೀಣಾ ಹೆಗಡೆ, ವೆಂಕಟರಮಣ ಹೆಗಡೆ, ಗಣಪತಿ ಭಟ್ ಹಂದಿಗೋಳ, ಪತ್ರಕರ್ತರಾದ ಮೋಹನ ಹೆಗಡೆ, ಮಧುಕೇಶ್ವರ ಯಾಜಿ, ಗಣಪತಿ ಗಂಗೊಳ್ಳಿ, ಉಷಾ ಹೆಗಡೆ, ಸುದರ್ಶನ್ ಹೆಗಡೆ, ಅರುಣಕುಮಾರ ಹಬ್ಬು, ಜಿ.ಆರ್. ಭಟ್, ಸಿಬಿ ಹೆಗಡೆ, ಸುಬ್ಬರಾಯ ಹೆಗಡೆ ಇತರರು ಇದ್ದರು.