

ಮೈಸೂರು:ಸಂಗೀತ ಆಲಿಸಲು ಹಿಂದೆ ಕಾರ್ಯಕ್ರಮ ನಡೆಯುವ ಜಾಗಕ್ಕೆ ಹೋಗಬೇಕಿತ್ತು. ಆದರೆ, ಇಂದು ಅಂಗೈಯಲ್ಲಿನ ಮೊಬೈಲ್‌ನಲ್ಲಿ ಲಕ್ಷಾಂತರ ಹಾಡು, ಸಂಗೀತ ಇದ್ದರೂ ಅದನ್ನು ಕೇಳಲು ಸಮಯ, ವ್ಯವಧಾನವೇ ಇಲ್ಲದಂತ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಹಿರಿಯ ಕಲಾವಿದ, ಚಿತ್ರ ನಿರ್ದೇಶಕ ಎಂ.ಎಸ್.ಪ್ರಕಾಶಬಾಬು ವಿಷಾದ ವ್ಯಕ್ತಪಡಿಸಿದರು.
ಗೆಳೆಯರ ಬಳಗದಿಂದ ರಂಗಾಯಣದ ರಂಗ ಚಾವಡಿಯಲ್ಲಿ ಭಾನುವಾರ ಆಯೋಜಿಸಿದ್ದ ಛಾಯಾಗ್ರಾಹಕ ಲೋಕೇಶ್ ಮೊಸಳೆ ಅವರ ವನ್ಯಜೀವಿ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಸ್ತುತ ಕಾಲಘಟ್ಟದಲ್ಲಿ ಮನುಷ್ಯನ ಧಾವಂತದ ಬದುಕಿಗೆ ತಡೆ ಹಾಕಬೇಕಾದ ಅವಶ್ಯಕತೆ ಇದೆ. ದಶಕಗಳ ಹಿಂದೆ ಸಂಗೀತ, ಗಾಯನ ಆಲಿಸಲು ಕಾರ್ಯಕ್ರಮಗಳು ನಡೆಯುತ್ತಿರುವ ಜಾಗಕ್ಕೆ ಹೋಗಬೇಕಿತ್ತು, ಇಲ್ಲವೇ ಕ್ಯಾಸೆಟ್, ಸಿಡಿಗಳ ಮೂಲಕ ಕೇಳಬೇಕಾಗಿತ್ತು. ಈಗ ಎಲ್ಲವೂ ಅಂಗೈನಲ್ಲಿರುವ ಮೊಬೈಲ್‌ನಲ್ಲಿ ದೊರೆಯುತ್ತವೆ. ನಮ್ಮ ಅಭಿರುಚಿಗೆ ತಕ್ಕ ಲಕ್ಷಾಂತರ ಹಾಡುಗಳು, ಸಂಗೀತ ಎಲ್ಲವೂ ಸಿಗುತ್ತಿದೆ. ಆದರೆ ಅದನ್ನೂ ಕೇಳುವುದಕ್ಕೆ ನಮಗೆ ಸಮಯವಿಲ್ಲವೆಂಬತೆ ಜಗತ್ತು ವರ್ತನೆ ಮಾಡುತ್ತಿದೆ. ಈ ಧೋರಣೆಗೆ ತಡೆ ಹಾಕದಿದ್ದರೆ ಮಾನವನ ಬದುಕು ಯಾಂತ್ರೀಕೃತವಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ಮಾನವ ಸಂಘಜೀವಿ. ಶಬ್ದ-ಧ್ವನಿಯ ಮೂಲಕ ಪರಸ್ಪರ ಸಂವಹನ ನಡೆಸಬೇಕಾಗಿರುವುದು ಆತನ ಸಹಜ ಗುಣವಾಗಿದೆ. ಆದರೆ, ಈಗ ಮೊಬೈಲ್ ಗೀಳು ಹತ್ತಿಸಿಕೊಂಡಿರುವ ಯುವ ಸಮೂಹ ಸದ್ದನ್ನೇ ಮಾಡುವುದಿಲ್ಲ. ಅವರ ಶಬ್ದಕ್ಕಿಂತ ಮೊಬೈಲ್‌ನಲ್ಲಿ ಹೊರಡುವ ಶಬ್ದವೇ ಬಹಳ ಜೋರಾಗಿ ಕೇಳುತ್ತದೆ. ಪ್ರಕೃತಿಯಲ್ಲಿ ಏನಾಗುತ್ತಿದೆ ಎನ್ನುವುದರ ಗೊಡವೆಯೇ ಅವರಿಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದಅವರು, ಕಾಡು-ಪ್ರಾಣಿ, ಜೀವ ವೈವಿಧ್ಯದ ಅರಿವು ಬೇಕಾಗಿಲ್ಲ. ಈಗಂತೂ ಕೃತಕ ಬುದ್ಧಿಮತ್ತೆ ಬಂದಿದೆ. ಅದರ ಕೈಗೆ ಎಲ್ಲವನ್ನೂ ಕೊಡುವುದರಿಂದ ಮುಂದೆ ಮನುಷ್ಯನ ಮಿದುಳು ಚುರುಕು ಕಳೆದುಕೊಳ್ಳಬಹುದು ಎಂದು ಕಳವಳ ವ್ಯಕ್ತಪಡಿಸಿದರು.
ಚಲನಚಿತ್ರ ಸಂಕಲನಕಾರ ಎಂ.ಎನ್.ಸ್ವಾಮಿ ಮಾತನಾಡಿ, ಹಿಂದೆ ಹಿರಿಯರು ಬೆಳಗ್ಗೆ ಎದ್ದಾಗ ದೇವರ ಫೋಟೋ ನೋಡಿ, ಕೊಟ್ಟಿಗೆಯಲ್ಲಿರುವ ಎತ್ತುಗಳನ್ನು ನೋಡಿ ಎಂದು ಕಿರಿಯರಿಗೆ ಬುದ್ಧಿ ಮಾತು ಹೇಳುತ್ತಿದ್ದರು. ಈಗ ಇದ್ಯಾವುದನ್ನು ಹೇಳಿಕೊಡುತ್ತಿಲ್ಲ. ಆದರೆ, ಈ ಕ್ಯಾಲೆಂಡರ್ ಅನ್ನು ವನ್ಯಜೀವಿಗಳು, ಜಾನಪದ ಕಲಾ ಪ್ರಕಾರಗಳು, ಹಳ್ಳಿಯ ಜೀವನದ ಛಾಯಾಚಿತ್ರಗಳಿಂದ ರೂಪಿಸಿರುವುದರಿಂದ ಈಗಿನ ಪೀಳಿಗೆಗೆ ನಮ್ಮ ಪರಿಸರದ ಅರಿವು ಮೂಡುತ್ತದೆ. ಇದರಿಂದ ಮುಂದಿನ ಪೀಳಿಗೆಗೆ ದಾಟಿಸುವ ವಿಶ್ವಾಸವನ್ನು ನಾವು ಉಳಿಸಿಕೊಳ್ಳಬಹುದಾಗಿದೆ ಎಂದರು.
ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು, ಪಕ್ಷಿ ತಜ್ಞ ಮ್ಯಾನ್ ಮನು, ಛಾಯಾಗ್ರಾಹಕ ಲೋಕೇಶ್ ಮೊಸಳೆ ಇದ್ದರು.