ಶಿಕ್ಷಣ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಕೃತಕ ಬುದ್ಧಿಮತ್ತೆ

14 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಆಧುನಿಕ ಯುಗದಲ್ಲಿ ವೇಗವಾಗಿ ಹೆಚ್ಚು ಬಳಕೆಯಲ್ಲಿರುವ ಹಾಗೂ ಶೀಘ್ರ ಜ್ಞಾನ ಹಂಚುತ್ತಿರುವ ತಂತ್ರಜ್ಞಾನ ಕೃತಕ ಬುದ್ಧಿಮತ್ತೆ (ಎಐ). ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಎಐ ಕ್ರಿಯಾಶೀಲವಾಗಿದ್ದರೂ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಛಾಪು ಮೂಡಿಸಿದೆ ಎಂದು ಪತ್ರಕರ್ತ ರವಿ ಹೆಗಡೆ ಹೇಳಿದರು.

ನಗರದ ರಾಯಾಪುರದ ಎಸ್​ಜೆಎಂವಿ ಮಹಾಂತ ಕಾಲೇಜಿನಲ್ಲಿ ಏರ್ಪಡಿಸಿದ್ದ ಉನ್ನತ ಶಿಕ್ಷಣದಲ್ಲಿ ಡಿಜಿಟಲ್​ ಕ್ರಾಂತಿ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಶಾಲೆ-ಕಾಲೇಜು ಕಲಿಯುವಾಗ ಬಂದ ಕಂಪ್ಯೂಟರ್​ ದೊಡ್ಡ ಡಿಜಿಟಲ್​ ತಂತ್ರಜ್ಞಾನ ಎನಿಸಿತ್ತು. ಮುಂದುವರೆದು ಸಾಕಷ್ಟು ತಂತ್ರಜ್ಞಾನಗಳು ಬಂದಿವೆ. ಆದರೆ, ಸದ್ಯ ಇರುವ ಐಎ ತಂತ್ರಜ್ಞಾನ ಡಿಜಿಟಲ್​ ಯುಗದಲ್ಲೇ ಅತ್ಯಂತ ಎತ್ತರದ ಸಂಶೋಧನೆ ಎನ್ನಬಹುದು. ತೀರಾ ಕಠಿಣ ಎನಿಸಿರುವ ಶಿಕ್ಷಣ ಸೇರಿ ಎಲ್ಲ ರೀತಿಯ ಸವಾಲುಗಳಿಗೆ ಕ್ಷಣ ಮಾತ್ರದಲ್ಲಿ ಪರಿಹಾರ ಒದಗಿಸುವ ಕಾರ್ಯ ಎಐ ಮಾಡುತ್ತಿದೆ. ಭಾರತದಲ್ಲಿ ಎಐ ಆಧಾರಿತ ಡಿಜಿಟಲ್​ ಶಿಕ್ಷಣ ಆರಂಭವಾಗಿದ್ದು, ಹಲವು ಸರ್ಕಾರಿ, ಖಾಸಗಿ ವಿಶ್ವ ವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ಈ ತಂತ್ರಜ್ಞಾನ ಅಳವಡಿಸಿಕೊಂಡಿವೆ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ. ರಾಜಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ನಂತರ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಡಿಜಿಟಲ್​ ತಂತ್ರಜ್ಞಾನ ಕುರಿತು ಪ್ರಬಂಧ ಮಂಡಿಸಿದರು.

ಕವಿವಿ ಕುಲಪತಿ ಪ್ರೊ. ಜಯಶ್ರೀ, ಸಮ್ಮೇಳನದ ಸಂಯೋಜಕರಾದ ಪ್ರೊ. ಜೆ.ಪಿ. ಯಂಡಿಗೇರಿ, ಪ್ರೊ. ಪುಷ್ಪಾ ಬಸನಗೌಡರ, ಪ್ರೊ.ಸಿ.ಕೆ. ಹುಬ್ಬಳ್ಳಿ, ಪ್ರಾಧ್ಯಾಪಕರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net