'ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿಗೊಳ್ಳುತ್ತಿರುವ ಕೃತಕ ಬುದ್ಧಿಮತ್ತೆ'

0-0x0-0-0#
0-0x0-0-0#
Published on

ಮೈಸೂರು: ಸಾಧನೆ ಅಂತರ್ಗತವಾಗಿ ಮಾಡಿದಾಗ ಹೊಸ ಸಾಧನೆಗಳು ಜಗತ್ತಿಗೆ ಪ್ರದರ್ಶಿತಗೊಳ್ಳುತ್ತದೆ. ತಂತ್ರಜ್ಞಾನವು ಇಂದು ಹೊಸ ನಾವೀನ್ಯತೆಯೊಂದಿಗೆ ಆವಿಷ್ಕಾರಗೊಳ್ಳುತ್ತಿದ್ದು, ಕೃತಕ ಬುದ್ಧಿಮತ್ತೆ ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿಗೊಳ್ಳುತ್ತಿದೆ ಎಂದು ಗಣಕ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಡಿ.ಎಸ್.ಗುರು ತಿಳಿಸಿದರು.
ಕೃಷ್ಣಮೂರ್ತಿಪುರಂನ ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಮಹಾವಿದ್ಯಾಲಯ ಐಕ್ಯೂಎಸಿ ಮತ್ತು ಗಣಕ ವಿಜ್ಞಾನ ವಿಭಾಗದಿಂದ ‘ಬುದ್ಧಿಮತ್ತೆ ಕ್ರಾಂತಿ: ತಂತ್ರಜ್ಞಾನಾಭಿವೃದ್ಧಿಯಿಂದ ಭವಿಷ್ಯ ರೂಪಣೆ’ ವಿಷಯ ಕುರಿತು ಶನಿವಾರ ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಕೃತಕ ಬುದ್ಧಿಮತ್ತೆಯ ಜ್ಞಾನ ತಿಳಿವಳಿಕೆ ಇಂದು ಅನಿವಾರ್ಯವಾಗಿದೆ. ಈ ಬಗ್ಗೆ ವಿಶ್ವವಿದ್ಯಾನಿಲಯಗಳು, ಸಂಶೋಧನಾ ಸಂಸ್ಥೆಗಳು ಇದರ ಬಗ್ಗೆ ಹೆಚ್ಚಿನ ಅಧ್ಯಯನ ಸಂಶೋಧನೆ ಮಾಡುವ ಅಗತ್ಯತೆಯ ಜತೆಗೆ ಅರಿವನ್ನು ಮೂಡಿಸಬೇಕಿದೆ ಎಂದು ತಿಳಿಸಿದರು.
ಈ ತಂತ್ರಾಂಶದಲ್ಲಿ ಸಾಹಿತ್ಯ, ಸಂಸ್ಕೃತಿಯೂ ಸೇರಿದಂತೆ ಕೃಷಿ ತೋಟಗಾರಿಕೆ ಕೈಗಾರಿಕಾ ವೈದ್ಯಕೀಯ ಕ್ರಾಂತಿಯನ್ನು ಕಾಣಬಹುದಾಗಿದೆ. ಇದು ವರ್ತಮಾನದ ಸಮಾಜದ ಬದಲಾವಣೆಗೂ ಕಾರಣವಾಗಬಹುದು ಮತ್ತು ಬಹು ಬೇಡಿಕೆಯ ಜ್ಞಾನವಾಗಿದೆ ಎಂದು ತಿಳಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ಪ್ರಾಧ್ಯಾಪಕಿ ಡಾ.ಎಚ್.ಎಸ್. ಶಶಿರೇಖಾ ಮಾತನಾಡಿ. ಫೇಸ್‌ಬುಕ್, ವಾಟ್ಸ್ ಆ್ಯಪ್ ತಂತ್ರಜ್ಞಾನ ಯುಗದಲ್ಲಿ ಮನುಷ್ಯ ಕೋಟೆ ಕಟ್ಟಿಕೊಂಡು ಒಬ್ಬಂಟಿಗನಾಗಿ ತನ್ನ ಸಮಸ್ಯೆಗಳ ನಡುವೆ ಸಿಕ್ಕಿಕೊಂಡು ಇರುವಾಗ ಇಂತಹ ಜ್ಞಾನ ಕ್ಷೇತ್ರಗಳು ನಮಗೆ ಅನಿವಾರ್ಯ ಎಂದೆನಿಸಿವೆ ಎಂದರು.
ಈ ಕಾಲಘಟ್ಟದ ಬಹುದೊಡ್ಡ ವಿಸ್ಮಯವಾಗಿರುವ ಆರ್ಟಿಫಿಯಲ್ ಇಂಟಲಿಜೆನ್ಸ್ (ಎಐ) ತಂತ್ರಜ್ಞಾನವು ದೇಶದ ಸದ್ಬಳಕೆಗೆ ಪರಿಣಾಮಕಾರಿಯಾಗಿಸುವ ಸಂಶೋಧನೆಯ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಟಿ.ಎಂ.ಥಾಸ್ಲೀಮಾ, ಡಾ.ಎಸ್. ಪ್ರಜ್ಞಾ, ಡಾ. ಅನಿತಾ ರಾಘವೇಂದ್ರ ಅವರು ಭಾಗವಹಿಸಿದ್ದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ನಯನ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ವಿಚಾರ ಸಂಕಿರಣದ ಸಂಯೋಜಕರಾದ ಪ್ರೊ.ಕೆ.ಎಸ್. ಸುಕೃತ, ಸಹ ಸಂಯೋಜಕಿ ಪ್ರೊ.ಎಸ್.ಕೆ.ರಮ್ಯಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net