ಮಕ್ಕಳಿಗೆ ತಂತ್ರಜ್ಞಾನದ ಅರಿವು ಮೂಡಿಸಲು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಸಲಹೆ

061020 Raichuru Teachers Training
ರಾಯಚೂರಿನ ಕೃಷಿ ವಿಜ್ಞಾನ ವಿವಿ ಪ್ರೇಕ್ಷಾಗೃಹದಲ್ಲಿ ಜಿಲ್ಲಾಡಳಿತದಿಂದ ಶಿಕ್ಷಕರಿಗಾಗಿ ಮಂಗಳವಾರ ಏರ್ಪಡಿಸಿದ್ದ ಕೌಶಲಾಭಿವೃದ್ಧಿ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಉದ್ಘಾಟಿಸಿದರು.
Published on

ರಾಯಚೂರು: ಕೃತಕ ಬುದ್ಧಿವಂತಿಕೆ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಕಲ್ಪನೆ ಮೂಡಿಸುವ ಕೆಲಸ ಮಾಡಬೇಕಾಗಿದೆ. ಇದಕ್ಕೆ ಶಿಕ್ಷಕರು ಹೊಸ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸಿಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಸಲಹೆ ನೀಡಿದರು.

ಕೃಷಿ ವಿಜ್ಞಾನಗಳ ವಿವಿಯ ಪ್ರೇಕ್ಷಾಗೃಹದಲ್ಲಿ ಜಿಲ್ಲಾಡಳಿತ ಮತ್ತು ಚೆನ್ನೈನ ಸಿಇಒಎಲ್ ಸಂಸ್ಥೆಯಿಂದ ಶಿಕ್ಷಕರಿಗಾಗಿ ಮಂಗಳವಾರ ಏರ್ಪಡಿಸಿದ್ದ ಕೌಶಲಾಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಆಸಕ್ತಿ ಹುಟ್ಟಿಸುವ ಕೆಲಸವಾಗಬೇಕು. ಅವರ ಸಾಮರ್ಥ್ಯ ಅರಿತು ಪ್ರೋತ್ಸಾಹಿಸಬೇಕು ಎಂದರು.

ಕಲ್ಯಾಣ ಕರ್ನಾಟಕ ಭಾಗ ಹಿಂದುಳಿದಿದೆ ಎನ್ನುವ ಕಾರಣಕ್ಕೆ 371 ಜೆ ಅಡಿ ಹಲವು ಸೌಲಭ್ಯ ಕಲ್ಪಿಸಲಾಗಿದೆ. ಸರ್ಕಾರ ಹಿಂದುಳಿದ 115 ಜಿಲ್ಲೆಗಳಲ್ಲಿ ರಾಯಚೂರು ಜಿಲ್ಲೆಯೂ ಒಂದು ಎಂದು ಗುರುತಿಸಿ ಮಹಾತ್ವಾಕಾಂಕ್ಷಿ ಜಿಲ್ಲೆ ಎಂದು ಸಮಗ್ರ ಅಭಿವೃದ್ಧಿಗೆ ಮುಂದಾಗಿದೆ.

ಕಲ್ಯಾಣ ಕರ್ನಾಟಕ ಭಾಗದಿಂದ ಲಕ್ಷಾಂತರ ಜನರು ಕೆಲಸ ಅರಸಿ ಗುಳೆ ಹೋಗುತ್ತಿದ್ದು, ಕರೊನಾ ಸಂಕಷ್ಟ ಗುಳೆ ಹೋಗುತ್ತಿದ್ದ ಜನಸಂಖ್ಯೆಯನ್ನು ಬಹಿರಂಗ ಮಾಡಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಒಳ್ಳೆಯ ಶಿಕ್ಷಣ, ಉದ್ಯೋಗವಕಾಶಗಳು ಇರುವುದರಿಂದ ಅಲ್ಲಿ ಗುಳೆ ಹೋಗುವವರ ಸಂಖ್ಯೆ ಕಡಿಮೆಯಿದೆ.

ಜಿಲ್ಲೆಯಲ್ಲಿಯೂ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಕೌಶಲದ ಕೊರತೆಯಿಂದ ನಿರುದ್ಯೋಗ ಸಮಸ್ಯೆ ಕಾಡುವಂತಾಗಿದೆ. ಈ ನಿಟ್ಟಿನಲ್ಲಿ ಕೌಶಲ ವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಶಿಕ್ಷಕರು ಹೊಸ ತಾಂತ್ರಿಕತೆ ಅಳಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಕೌಶಲ ಹೆಚ್ಚಿಸಲು ಅನುಕೂಲವಾಗಲಿದೆ ಎಂದು ಆರ್.ವೆಂಕಟೇಶ ಕುಮಾರ ಹೇಳಿದರು.

ಕೃಷಿ ವಿಜ್ಞಾನ ವಿವಿ ಶಿಕ್ಷಣ ನಿರ್ದೇಶಕ ಡಾ.ಎಂ.ಜಿ.ಪಾಟೀಲ್, ಅಪರ ಜಿಲ್ಲಾಧಿಕಾರಿ ದುರಗೇಶ, ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಷಿ, ಜಿಪಂ ಯೋಜನಾಧಿಕಾರಿ ಡಾ.ಟಿ.ರೋಣಿ, ಡಯಟ್ ಪ್ರಾಚಾರ್ಯ ವೃಷಭೇಂದ್ರಯ್ಯಸ್ವಾಮಿ, ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಎಂ.ಎಂ.ಗೋನಾಳ, ಬಿಇಒ ಚಂದ್ರಶೇಖರ ದೊಡ್ಡಮನಿ ಉಪಸ್ಥಿತರಿದ್ದರು.

ತಾಂತ್ರಿಕತೆ ನಮ್ಮ ಬದುಕಿನ ಭಾಗವಾಗಿ ಮಾರ್ಪಟ್ಟಿದ್ದು, ಕೃತಕ ಬುದ್ದಿವಂತಿಕೆ ಇಂದು ಎಲ್ಲ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಹರಡಿದೆ. ಅದನ್ನು ನಾವು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಎನ್ನುವುದು ಪ್ರಮುಖವಾಗಿದೆ.| ಎಂ.ಆರ್.ಸೆಂಥಿಲ್‌ಕುಮಾರ ಸಿಇಒಎಲ್ ಸಂಸ್ಥೆ ಸಂಯೋಜಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net