ನಾಳೆ ಕೃತಕ ಕೈ ಉಚಿತ ಜೋಡಣೆ ಶಿಬಿರ

Artificial hand free assembly camp tomorrow
ಜಮಖಂಡಿ ನಗರದ ಕಾನಿಪ ಸಂಘದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಮತೀರ್ಥ ರೋಟರಿ ಸಂಸ್ಥೆ ಅಧ್ಯಕ್ಷ ಕಿರಣ ಜಾಲಿಹಾಳ ಮಾತನಾಡಿದರು. ಕಾರ್ಯದರ್ಶಿ ಜಗದೀಶ ಮಣ್ಣಿಕಟ್ಟಿ, ಖಜಾಂಚಿ ಬಸವರಾಜ ಕಲ್ಯಾಣಶೆಟ್ಟಿ ಇತರರಿದ್ದರು.
Published on

ಜಮಖಂಡಿ: ರಾಮತೀರ್ಥ ರೋಟರಿ ಸಂಸ್ಥೆ, ರೋಟರಿ ಕ್ಲಬ್‌ಡೌನ್ ಟೌನ್ ಹಾಗೂ ಪುಣೆಯ ಕಮ್ಯೂನಿಟಿ ಐಕೇಯರ್ಡೇ ಫೌಂಡೇಷನ್ ಸಹಯೋಗದಲ್ಲಿ ನಗರದ ಬಸವ ಭವನದಲ್ಲಿ ಸೆ.29 ರಂದು ಬೆಳಗ್ಗೆ 8.30 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕೃತಕ ಕೈ ಉಚಿತ ಜೋಡಣೆ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಕಿರಣ ಜಾಲಿಹಾಳ ಹೇಳಿದರು.

ನಗರದ ಕಾನಿಪ ಸಂಘದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಒಂದು ಕೈ ಜೋಡಣೆಗೆ ಅಂದಾಜು 40 ರಿಂದ 55 ಸಾವಿರ ರೂ. ವರೆಗೆ ವೆಚ್ಚ ತಗುಲಲಿದೆ. ಉತ್ತರ ಕರ್ನಾಟಕದಲ್ಲಿ ಪ್ರಪ್ರಥಮ ಶಿಬಿರ ಇದಾಗಲಿದೆ ಎಂದರು.

ಶಿಬಿರದಲ್ಲಿ ವಿವಿಧ ಜಿಲ್ಲೆಗಳಿಂದ 125ಕ್ಕೂ ಹೆಚ್ಚು ಕೈ ವಿಕಲಾಂಗ ಶಿಬಿರಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಇನ್ನೂ ಯಾರಾದರೂ ಉಳಿದಿದ್ದರೆ ಅಂದೇ ಬರಬಹುದಾಗಿದೆ. ಈ ಕೃತಕ ಕೈ ಜೋಡಣೆ ಬಳಿಕ ಅವರಿಗೆ ತರಬೇತಿ ನೀಡಿ ಸಂದರ್ಶನ ಮಾಡಲಾಗುವುದು. ಕೃತಕ ಕೈ ಜೋಡಣೆಯಿಂದ ಸಣ್ಣ ಪುಟ್ಟ ಕಾರ್ಯ, ವಾಹನ ಚಲಾವಣೆ ಮಾಡಲು ಅನುಕೂಲಕರವಾಗಿದೆ. ಬೇರೆಡೆಯಿಂದ ಆಗಮಿಸುವ ಕೈ ವಿಕಲಾಂಗ ಶಿಬಿರಾರ್ಥಿಗಳಿಗೆ ಊಟ, ವಸತಿ ಕಲ್ಪಿಸಲಾಗುವುದು. ಯಾವುದೇ ಹಣ ಸಂದಾಯ ಮಾಡುವ ಅವಶ್ಯಕತೆ ಇಲ್ಲ ಎಂದು ಮಾಹಿತಿ ನೀಡಿದರು.

ಶಿಬಿರಕ್ಕೆ ಅಂದಾಜು 5 ಲಕ್ಷ ರೂ. ವೆಚ್ಚ ತಗುಲುವ ಸಾಧ್ಯತೆಯಿದ್ದ್ದು, ಸರಾಫ್ ಬಜಾರ 1.5 ಲಕ್ಷ ರೂ., ಶಾಸಕ ಜಗದೀಶ ಗುಡಗುಂಟಿ 25 ಸಾವಿರ ಹಾಗೂ ಮಾಜಿ ಶಾಸಕ ಆನಂದ ನ್ಯಾಮಗೌಡ 10 ಸಾವಿರ ಸಹಾಯಧನ ನೀಡಿದ್ದಾರೆ ಎಂದು ತಿಳಿಸಿದರು. ಶಿಬಿರದಲ್ಲಿ ಬಿಎಲ್‌ಡಿ ನರ್ಸಿಂಗ್ ಕಾಲೇಜಿನ 25, ಪ್ಯಾರಾ ಮೆಡಿಕಲ್ ಕಾಲೇಜಿನ 20 ಹಾಗೂ ಜಿಜಿ ಹೈಸ್ಕೂಲಿನ 15 ವಿದ್ಯಾರ್ಥಿಗಳು ಸೇವಾ ಕಾರ್ಯ ಮಾಡಲಿದ್ದಾರೆ ಎಂದರು.

ಕಾರ್ಯದರ್ಶಿ ಜಗದೀಶ ಮಣ್ಣಿಕಟ್ಟಿ, ಖಜಾಂಚಿ ಬಸವರಾಜ ಕಲ್ಯಾಣಶೆಟ್ಟಿ, ಹಿರಿಯ ಸದಸ್ಯರಾದ ಸಂದೀಪ ಓಸ್ವಾಲ್, ಸುರೇಶ ಹಿರೇಮಠ, ಚಿದಾನಂದ ಸಿದ್ದಾಪೂರಮಠ, ರಾಜು ತಡಸದ, ಮಹಾಂತೇಶ ನರಸನಗೌಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net