

ವಿಜಯವಾಣಿ ಸುದ್ದಿಜಾಲ ಉಡುಪಿ
ಮಳೆಗಾಲ ಆರಂಭಕ್ಕೆ ತಿಂಗಳುಗಳಷ್ಟೇ ಬಾಕಿ ಉಳಿದಿದ್ದು, ನಗರಸಭೆಯಿಂದ ವಿವಿಧ ವಾರ್ಡ್‌ಗಳಲ್ಲಿ ಚರಂಡಿ ಸ್ವಚ್ಛಗೊಳಿಸುವುದು ಸಹಿತ ಹಲವು ಮುನ್ನೆಚ್ಚರಿಕೆ ಕಾರ್ಯಗಳು ಆರಂಭಗೊಂಡಿವೆ. ಪ್ರತಿ ವರ್ಷವೂ ಉಡುಪಿ ನಗರಸಭೆಗೆ ಕೃತಕ ನೆರೆ ಸಮಸ್ಯೆ ನಿರ್ವಹಿಸುವುದು ಸವಾಲಾಗಿದ್ದು, ಈಗಿನಿಂದಲೇ ಸೂಕ್ತ ಸಿದ್ಧತೆಗಳನ್ನು ಮಾಡಲೇಬೇಕಿದೆ.
ಈಗಾಗಲೇ ರಸ್ತೆ ಬದಿಗಳಲ್ಲಿ, ಚರಂಡಿಗಳಲ್ಲಿ ಹೂಳು, ತ್ಯಾಜ್ಯಗಳ ತೆರವು ಕಾರ್ಯ ನಡೆಯುತ್ತಿದೆ. ಸಣ್ಣ ಮಳೆಗೂ ಕೃತಕ ನೆರೆ ಉಂಟಾಗುವ ಪ್ರದೇಶಗಳಲ್ಲಿ 50 ಮಂದಿ ಕಾರ್ಮಿಕರನ್ನೊಳಗೊಂಡ ತಂಡ ಕೆಲಸ ಮಾಡುತ್ತಿದ್ದು, ಪ್ರದೇಶವಾರು ಕಾರ್ಯಗತಗೊಳಿಸಲಾಗುತ್ತಿದೆ.
ಕಲ್ಸಂಕ ತೋಡು ಸ್ವಚ್ಛತೆ ಅಗತ್ಯ: ನಗರದ ಪ್ರಮುಖ ಸ್ಥಳ ಕಲ್ಸಂಕ ತೋಡಿನಲ್ಲಿ ಸ್ಥಳೀಯರು, ಪ್ರವಾಸಿಗರು ಎಸೆಯುವ ತ್ಯಾಜ್ಯ ರಾಶಿ ರಾಶಿ ಶೇಖರಣೆಯಾಗಿದ್ದು, ಇನ್ನೂ ಸ್ವಚ್ಛತೆ ಕೆಲಸ ಆರಂಭವಾಗಿಲ್ಲ. ಜತೆಗೆ ಕೊಳಚೆ ನೀರು ಸಂಗ್ರಹಗೊಂಡಿರುವುದರಿಂದ ಪರಿಸರದಲ್ಲಿ ದುರ್ವಾಸನೆ ಬೀರುತ್ತಿದೆ. ತೋಡಿನಲ್ಲಿ ತುಂಬಿರುವ ಹೂಳನ್ನು ತೆರೆವು ಮಾಡುವ ಕಾರ್ಯ ಇನ್ನೂ ಆರಂಭಗೊಂಡಿಲ್ಲ. ಕಳೆದ ವರ್ಷ ಕಲ್ಸಂಕ ಭಾಗದಲ್ಲಿ ಮಾತ್ರ ಹೂಳೆತ್ತಿದ್ದರಿಂದ ಬೇರೆ ಕಡೆಗಳಲ್ಲಿ ಕೃತಕ ನೆರೆ ಉಂಟಾಗಿತ್ತು.
ಚರಂಡಿಗಳಲ್ಲಿ ದೊಡ್ಡ ಮಟ್ಟದ ತ್ಯಾಜ್ಯಗಳ ರಾಶಿಯೇ ಸಂಗ್ರಹಗೊಂಡಿದ್ದು, ಪ್ಲಾಸ್ಟಿಕ್ ಲೋಟ, ಅನುಪಯುಕ್ತ ಬಟ್ಟೆಗಳು, ತರಕಾರಿ ಹಾಗೂ ಮಾಂಸಾಹಾರದ ತ್ಯಾಜ್ಯಗಳೇ ಅಧಿಕ ಪ್ರಮಾಣದಲ್ಲಿ ಸಂಗ್ರಹಗೊಂಡಿವೆ. ಇದರಿಂದ ಮಳೆ ನೀರು ಸರಾಗವಾಗಿ ಹರಿಯದೆ ಚರಂಡಿ ಬ್ಲಾಕ್ ಆಗುತ್ತದೆ. ಚರಂಡಿಗಳಲ್ಲೂ ಹೂಳು ತುಂಬಿದ್ದು, ಇವು ನೇರವಾಗಿ ತೋಡಿಗೆ ಸೇರುವ ಕಾರಣ ಕೃತಕ ನೆರೆ ಉಂಟಾಗುತ್ತಿದೆ. ಶೀಘ್ರವೇ ಸ್ಥಳೀಯಾಡಳಿತ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಸಂಭಾವ್ಯ ತೊಂದರೆಗಳನ್ನು ತಡೆಗಟ್ಟಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರತಿ ವರ್ಷವೂ ಸಣ್ಣ ಮಳೆಗೂ ಉಡುಪಿಯ ಕಲ್ಸಂಕ, ಮಠದಬೆಟ್ಟು, ಬನ್ನಂಜೆ, ಗುಂಡಿಬೈಲು, ನಿಟ್ಟೂರು, ಶ್ರೀಕೃಷ್ಣ ಮಠದ ಪಾರ್ಕಿಂಗ್ ಪರಿಸರ, ಬಡಗುಪೇಟೆ, ತೆಂಕಪೇಟೆಗಳಲ್ಲಿ ಕೃತಕ ನೆರೆ ಉಂಟಾಗುತ್ತದೆ.
ಮಳೆಗಾಲಕ್ಕೆ ನಗರಾದ್ಯಂತ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ನೆರೆಪೀಡಿತ ಪ್ರದೇಶಗಳನ್ನು ಮೊದಲ ಹಂತದಲ್ಲಿ ಗುರುತಿಸಿ ಚರಂಡಿ ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಒಂದು ಹಿಟಾಚಿ ಮತ್ತು ಮೂರು ಜೆಸಿಬಿ ಕಾರ್ಯನಿರ್ವಹಿಸುತ್ತಿವೆ. ದೊಡ್ಡ ತೋಡುಗಳ ಹೂಳೆತ್ತಲು ಟೆಂಡರ್ ಕರೆಯಲಾಗುತ್ತಿದೆ. ಡಾ.ಉದಯ್ ಶೆಟ್ಟಿ, ಪೌರಾಯುಕ್ತ, ಉಡುಪಿ ನಗರಸಭೆ. https://www.vijayavani.net/solar-machine-came-for-sowing-seeds https://www.vijayavani.net/school-centenary-pre-meeting