ಕೃತಕ ನೆರೆಗೆ ಎರಡು ಮನೆಗಳು ಜಲಾವೃತ

rain
Published on

ಪಡುಬಿದ್ರಿ: ಕಾಪು ತಾಲೂಕಿನ ವಿವಿಧೆಡೆ ಸೋಮವಾರ ರಾತ್ರಿಯಿಡೀ ಸುರಿದ ಮಳೆ ಹಾಗೂ ಬಿರುಸಿನ ಗಾಳಿಯಿಂದ ಕೃತಕ ನೆರೆ ಉಂಟಾಗಿ ಸೊತ್ತು ನಾಶವಾಗಿದೆ.

ಕಾಪು ಪುರಸಭಾ ವ್ಯಾಪ್ತಿಯ ಪೊಯ್ಯಪೊಡಿಕಲ್ಲ ಗರಡಿ ಸಮೀಪದ ಭಾರತಿ ಭಾಸ್ಕರ್ ಸುವರ್ಣ ಎಂಬುವರ ಮನೆ ಹೆಂಚುಗಳು ಹಾರಿಹೋಗಿದೆ. ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಹೆದ್ದಾರಿ ಪಕ್ಕದ ಕೊಂಬೆಟ್ಟು ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿ ಎರಡು ಮನೆಗಳು ಜಲಾವೃತಗೊಂಡಿತು. ಪಡುಬಿದ್ರಿ ಗ್ರಾಪಂ ಅಧಿಕಾರಿಗಳು ಆಗಮಿಸಿ ಜೆಸಿಬಿ ಮೂಲಕ ನೀರು ಹರಿಯಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದರು.

ಗಾಳಿ-ಮಳೆಯಿಂದ ಕಾಪು ತಾಲೂಕಿನಲ್ಲಿ 19 ಸಾವಿರ ರೂ. ಮೌಲ್ಯದ ಸೊತ್ತು ಹಾನಿಯಾಗಿದೆ. ಕಾಪು ಪಡು ಗ್ರಾಮದ ಭಾಸ್ಕರ ಹಾಗೂ ಲಲಿತಾ ಎಂಬುವರ ಮನೆಗಳ ಹೆಂಚು ಹಾರಿ ಹೋಗಿ ತಲಾ 7 ಸಾವಿರ ರೂ., ಬೇಬಿ ಮಡಿವಾಳ್ತಿ, ಲಲಿತಾ ಎಂಬುವರ ಮನೆ ಹೆಂಚು ಹಾರಿ ಹೋಗಿ 5 ಸಾವಿರ ರೂ. ನಷ್ಟ ಉಂಟಾಗಿದೆ.

ಪಾದೆಬೆಟ್ಟು ತಪ್ಪದ ಜಲದಿಗ್ಬಂಧನ: ಪ್ರತಿವರ್ಷವೂ ಮಳೆಗೆ ಹಲವಾರು ಬಾರಿ ಜಲದಿಗ್ಬಂಧನಕ್ಕೊಳಗಾಗುವ ಪಡುಬಿದ್ರಿ ಪಾದೆಬೆಟ್ಟು ಗ್ರಾಮದ ಹೊಯಿಗೆತೋಟ ಪ್ರದೇಶ ಮಂಗಳವಾರವೂ ಜಲಾವೃತವಾಗಿ 6 ಮನೆಯವರು ತೊಂದರೆ ಅನುಭವಿಸಿದರು. ಕಾಮಿನಿ ನದಿ ಸೇರುವ ಬೃಹತ್ ತೋಡುಗಳ ಮಧ್ಯದ ಪ್ರದೇಶದಲ್ಲಿರುವ ಹೊಯಿಗೆತೋಟದ 6 ಮನೆಗಳ ನಿವಾಸಿಗಳು ಸೂಕ್ತ ಸಂಪರ್ಕ ರಸ್ತೆಯಿಲ್ಲದೆ ಗದ್ದೆ ಬದುಗಳಲ್ಲೇ ಸಾಗಬೇಕಿದೆ. ಮಳೆಯಿಂದ ನೆರೆ ನೀರು ತುಂಬಿ ಗದ್ದೆ ಬದುಗಳು ಮುಳುಗಡೆಯಾದರೆ ಹೆಚ್ಚಿನ ಸಮಸ್ಯೆಯಾಗಲಿದೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪರಿಹಾರ ಲಭಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net