ಮಲ್ಪೆ ಆಹಾರ ಮಳಿಗೆಗಳಿಗೆ ನಗರಸಭೆ ಅಧಿಕಾರಿಗಳ ದಾಳಿ

udp-14-cmc
Published on

ಉಡುಪಿ: ಮೀನಿನ ಆಹಾರ ಖಾದ್ಯಗಳಿಗೆ ಕೃತಕ ಬಣ್ಣ ಹಾಗೂ ರುಚಿ ಬರುವ ರಾಸಾಯನಿಕ ಸೇರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಪ್ರವಾಸಿಗರ ದೂರಿನ ಹಿನ್ನೆಲೆಯಲ್ಲಿ ನಗರಸಭಾ ಪೌರಾಯುಕ್ತ ರಾಯಪ್ಪ ನೇತೃತ್ವದಲ್ಲಿ ಅಧಿಕಾರಿಗಳು ಮಲ್ಪೆ ಬೀಚ್​ನ ಬಳಿಯ ಹೊಟೇಲ್​ಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಮಲ್ಪೆ ಬೀಚ್​ ಸುತ್ತಮುತ್ತಲು ಮೀನಿನ ಪ್ರೈ, ಮಸಾಲ ಪ್ರೈ, ಚಿಕನ್​ ಕಬಾಬ್​, ಚೈನಿಸ್​ ಫುಡ್​ಗಳ ಇಪ್ಪತ್ತಕ್ಕೂ ಹೆಚ್ಚು ಅಂಗಡಿಗಳಿದ್ದು, ಇಲ್ಲಿ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಹೆಚ್ಚಿನ ಹೊಟೇಲ್​ಗಳಲ್ಲಿ ಆಹಾರ ಪದಾರ್ಥಗಳಿಗೆ ಕೃತಕ ಬಣ್ಣ, ಅತೀಯಾದ ರುಚಿ ಬರುವ ರಾಸಾಯನಿಕ ಬೆರೆಸಿ ತಯಾರು ಮಾಡುತ್ತಾರೆ ಎಂದು ಪ್ರವಾಸಿಗರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರು ತಕ್ಷಣ ಮಲ್ಪೆ ಬೀಚ್​ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಹಾಗೂ ಉಡುಪಿ ನಗರಸಭಾ ಪೌರಾಯುಕ್ತರಿಗೆ ಪರಿಶೀಲಿಸಲು ನಿರ್ದೇಶನ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೌರಾಯುಕ್ತ ರಾಯಪ್ಪ ಅವರ ನೇತೃತ್ವದಲ್ಲಿ ನಗರಸಭೆಯ ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ದಾಳಿ ನಡೆಸಿದ್ದಾರೆ.

ದಾಳಿ ಸಂದರ್ಭದಲ್ಲಿ ಹೆಚ್ಚಿನ ಹೊಟೇಲ್​ಗಳಲ್ಲಿ ಮಾನವನ ಜೀವಕ್ಕೆ ಹಾನಿಕಾರಕವಾಗುವ ಕೃತಕ ಬಣ್ಣ ಹಾಗೂ ಅಜಿನಮೊಟೊ ಬಳಸುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಹೊಟೇಲ್​ ಮಾಲಕರಿಗೆ ಎಚ್ಚರಿಕೆ ನೀಡಿದ ಪೌರಾಯುಕ್ತರು ಇನ್ನು ಮುಂದಿನ ದಿನಗಳಲ್ಲಿ ಆಹಾರ ಪದಾರ್ಥಗಳಿಗೆ ವಿಷಯುಕ್ತ ಬಣ್ಣ, ಟೆಸ್ಟಿ ಪೌಡರ್​ ಬಳಕೆ ಮಾಡದಂತೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net