

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಪ್ರಸ್ತುತ ಎಲ್ಲೆಡೆ ಕಲ್ಲಂಗಡಿ ಹಣ್ಣಿನ ವ್ಯಾಪಾರ ಜೋರಾಗಿದೆ, ಮಾರುಕಟ್ಟೆಗಳಲ್ಲಿ ರಸ್ತೆಬದಿಗಳಲ್ಲಿ ರಾಶಿಗಟ್ಟಲೆ ಕಲ್ಲಂಗಡಿ ಕಂಡುಬರುತ್ತಿದೆ. ದಾರಿಯಲ್ಲಿ ಸಾಗುವ ಯಾರೇ ಆದರೂ ಕಲ್ಲಂಗಡಿ ಚೂರನ್ನು ತಿನ್ನದೆ ಮುಂದೆ ಹೆಜ್ಜೆ ಇಡುವುದಿಲ್ಲ ಎಂಬಂತೆ ಬೇಸಿಗೆ ನೆತ್ತಿ ಸುಡುತ್ತಿದೆ. ಇದರ ನಡುವೆ ಕಲ್ಲಂಗಡಿಗೆ ಕೃತಕ ಬಣ್ಣ ಬಳಸುತ್ತಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಸತ್ಯಾಸತ್ಯಾತೆ ಪರಿಶೀಲನೆಗೆ ಜಿಲ್ಲಾಡಳಿತ ಮುಂದಾಗಿದೆ.
ಬೇಸಿಗೆ ಕಾಲ ಶುರುವಾಗುತ್ತಿದ್ದಂತೆ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಜಾಸ್ತಿಯಾಗುತ್ತದೆ. ಕಲ್ಲಂಗಡಿಯಲ್ಲಿ ಹೆಚ್ಚು ನೀರಿನಾಂಶ ಇರುವುದರಿಂದ ಇದು ದೇಹದಲ್ಲಿ ನಿರ್ಜಲೀಕರಣ ಆಗದಂತೆ ನೋಡಿಕೊಳ್ಳುವುದರ ಜತೆಗೆ ದೇಹಕ್ಕೆ ತಂಪು ನೀಡುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣಿನ ವ್ಯಾಪಾರ ಜೋರಾಗಿದೆ. ಗ್ರಾಹಕರು ಸಹ ಮುಗಿಬಿದ್ದು ಕಲ್ಲಗಂಡಿ ಖರೀದಿಸಿ ಸೇವಿಸುತ್ತಿದ್ದಾರೆ. ಇದರ ನಡುವೆ ಕೃತಕ ಬಣ್ಣದ ಸುದ್ದಿ ಸದ್ದು ಮಾಡುತ್ತಿದ್ದು ಗ್ರಾಹಕರು ಅತಂಕಗೊಂಡಿದ್ದಾರೆ. ಇದರ ಸತ್ಯಾಸತ್ಯತೆ ಪತ್ತೆಗೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಕೆಮಿಕಲ್ ಕಲ್ಲಂಗಡಿ?ಈಗಾಗಲೇ ನೆರೆಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಕ್ಕಿಜ್ವರದ ಆತಂಕದ ಕಾಡುತ್ತಿದ್ದು ಗ್ರಾಮಾಂತರ ಜಿಲ್ಲಾಡಳಿತವೂ ಅಲರ್ಟ್ ಆಗಿದೆ ಇದರ ಬೆನ್ನಲ್ಲೆ ನಕಲಿ ಕಲ್ಲಂಗಡಿ ಹಣ್ಣುಗಳು ಜಿಲ್ಲೆಯ ಹಲವು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಎನ್ನಲಾಗಿದ್ದು ಕೆಮಿಕಲ್ ಕಲ್ಲಂಗಡಿ ಸೇವಿಸಿದ್ರೆ ಆನಾರೋಗ್ಯಕ್ಕೆ ತುತ್ತಾಗುವ ಆತಂಕದ ಎದುರಾಗಿದೆ ಎಂಬ ಮಾತುಗಳು ಹರಿದಾಡುತ್ತಿದ್ದು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.
ವಿಶೇಷ ಕಾರ್ಯಾಚರಣೆ:ಕೆಲವು ದಿನಗಳ ಹಿಂದಷ್ಟೆ ವಿಶೇಷ ಕಾರ್ಯಾಚರಣೆ ನಡೆಸಿದ್ದ ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳು, ಹೋಟೆಲ್ಗಳಲ್ಲಿ ಇಡ್ಲಿಗಳನ್ನು ತಯಾರಿಸುವಾಗ ಪ್ಲಾಸ್ಟಿಕ್‌ಶೀಟ್ ಬಳಸುವುದನ್ನು ಪತ್ತೆ ದಂಡ ವಿಧಿಸಿದ್ದರು. ಇದರ ಬೆನ್ನಲ್ಲೇ ತರಕಾರಿ ಅಂಗಡಿಗಳಲ್ಲಿ ಮಾರಾಟ ಮಾಡುವ ಹಸಿ ಬಟಾಣಿಕಾಳು, ರಸ್ತೆ ಬದಿಗಳಲ್ಲಿ ಮಾರಾಟ ಮಾಡುವ ಕಲ್ಲಂಗಡಿ ಹಣ್ಣುಗಳಲ್ಲಿ ಕೃತಕ ಬಣ್ಣಗಳನ್ನು ಬಳಸಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದೆ. ಇಂದಿನಿಂದಲೇ ಕಾರ್ಯಾಚರಣೆ ಆರಂಭಿಸುವ ಸುಳಿವು ನೀಡಿರುವ ಇಲಾಖೆ ಎಲ್ಲೆಲ್ಲೆ ಹೆಚ್ಚು ಕಲ್ಲಂಗಡಿ ಮಾರಾಟ ಮಾಡುತ್ತಿದ್ದರೆ ಎಂಬುದನ್ನು ಪರಿಶೀಲಿಸಿ ತಂಡಗಳ ಮೂಲಕ ಕಾರ್ಯಾಚರಣೆಗಿಳಿಯಲಿದೆ ಎನ್ನಲಾಗಿದೆ.
ಮಧ್ಯವರ್ತಿಗಳ ಮೇಲೆ ಶಂಕೆ:ಬೀದಿ ಬದಿಗಳಲ್ಲಿ, ಅಂಗಡಿಗಳಲ್ಲಿ, ಮಾಲ್ಗಳಲ್ಲಿ ಮಾರಾಟ ಮಾಡುವ ಕಲ್ಲಂಗಡಿ ಹಣ್ಣುಗಳನ್ನು ಮಧ್ಯವರ್ತಿಗಳು ರೈತರಿಂದ ಖರೀದಿ ಮಾಡಿ ಮಾರಾಟ ಕೇಂದ್ರಗಳಿಗೆ ತಲುಪಿಸುತ್ತಾರೆ. ಈ ಮಧ್ಯವರ್ತಿಗಳಲ್ಲಿ ಕೆಲವರು ಹಣ್ಣುಗಳಿಗೆ ಕೃತಕ ಬಣ್ಣದ ಇಂಜೆಕ್ಷನ್ ನೀಡುತ್ತಾರೆ. ಅದರಿಂದ ಕಲ್ಲಂಗಡಿ ಹಣ್ಣನ್ನು ಕೊಯ್ದಗ ಅದು ಅತ್ಯಂತ ಕೆಂಪಾಗಿ, ಆಕರ್ಷಣೀಯವಾಗಿ ಕಾಣುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಇನ್ನೂ ಕೆಲವರು ಕೆಂಪು ಬಣ್ಣದ ಜತೆಗೆ ರುಚಿಯನ್ನು ತರುವಂಥ ರಾಸಾಯನಿಕಗಳನ್ನು ಇಂಜೆಕ್ಟ್ ಮಾಡಿರುತ್ತಾರೆ. ಹಾಗಾಗಿ, ಕಲ್ಲಂಗಡಿ ಹಣ್ಣನ್ನು ಕೊಳ್ಳುವಾಗ ಅಂಗಡಿಯವರು ನೀಡುವ ಸ್ಯಾಂಪಲ್ ಹಣ್ಣು ಕೆಂಪು ಬಣ್ಣದ್ದಾಗಿರುತ್ತದೆ ಹಾಗೂ ರುಚಿಕರವಾಗಿರುತ್ತದೆ. ಇದಕ್ಕೆ ಗ್ರಾಹಕರು ಮರುಳಾಗಿ ಹಣ್ಣುಗಳನ್ನು ಕೊಳ್ಳುತ್ತಾರೆ. ಹೀಗಾಗಿ ಇದನ್ನು ತಡೆಯಲು ಕೃತಕ ರಾಸಾಯನಿಕಗಳಿಂದ ಜನರನ್ನು ಪಾರು ಮಾಡಲು ಆಹಾರ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಸ್ಯಾಂಪಲ್ ಸಂಗ್ರಹ: ಈಗಾಗಲೇ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಕೆಲವು ಕಡೆಗಳಲ್ಲಿ ಕಲ್ಲಂಗಡಿ ಮಾದರಿಯನ್ನು ಪಡೆದು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ವರದಿ ಬಂದ ನಂತರ ನಿಜಾಂಶ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರುಕಟ್ಟೆಯಲ್ಲಿನ ಎಲ್ಲ ಹಣ್ಣುಗಳ ಮಾದರಿ ಸಗ್ರಹಿಸಿ ಕಳುಹಿಸಿಕೊಡುವುದು ಕಷ್ಟಸಾಧ್ಯ ಈ ಹಿನ್ನೆಲೆಯಲ್ಲಿ ಶಂಕಾಸ್ಪದ ಹಣ್ಣುಗಳ ಮಾದರಿಯನ್ನಷ್ಟೇ ಕಳುಹಿಸಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲ್ಲಂಗಡಿ ಹಣ್ಣಿನಲ್ಲಿ ಕೃತಕ ಬಣ್ಣದ ರಾಸಾಯನಿಕ ಇಂಜೆಕ್ಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ ಕೆಲವು ಮಾಧ್ಯಮಗಳಲ್ಲೂ ಸುದ್ದಿ ಬಿತ್ತರವಾಗಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಲ್ಲಂಗಡಿ ಮಾರಾಟ ಮಾಡುತ್ತಿರುವ ಸ್ಥಳಗಳಲ್ಲಿ ಹಣ್ಣುಗಳ ಪರೀಕ್ಷೆ ನಡೆಸುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಗೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತಪಾಸಣೆ ಆರಂಭಿಸಲಿದ್ದಾರೆ.
ಬಿ.ಎ.ಬಸವರಾಜು, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ
------------
ಆಹಾರ ಗುಣಮಟ್ಟ ಹಾಗೂ ಸುರಕ್ಷತೆ ಹಿನ್ನೆಲೆಯಲ್ಲಿ ನಿರಂತರವಾಗಿ ತಪಾಸಣೆ ಮುಂದುವರೆಸಲಾಗಿದೆ ಇದರ ನಡುವೆ ಕಲ್ಲಂಗಡಿ ಹಣ್ಣಿನಲ್ಲಿ ರಾಸಾಯನಿಕ ಬಳಕೆ ಬಗ್ಗೆ ಅನುಮಾನ ಬಂದಿದ್ದು ಈಗಾಗಲೆ ಕೆಲವು ಕಡೆಗಳಲ್ಲಿ ಹಣ್ಣುಗಳ ಮಾದರಿಯನ್ನು ಪರೀಕ್ಷಾಲಯಕ್ಕೆ ಕಳುಹಿಸಿಕೊಡಲಾಗಿದೆ. ವರದಿ ಬಂದ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ. ಕಾರ್ಯಾಚರಣೆ ಮುಂದುವರೆಸಲಾಗಿದೆ.
ಧರ್ಮೆಂದ್ರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ