ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ ವೀರರಾಣಿ ಚನ್ನಮ್ಮ; ಇಂದು-ನಾಳೆ ಕಿತ್ತೂರು ಉತ್ಸವ

Kittur
Published on

ಬ್ರಿಟಿಷರ ವಿರುದ್ಧ ಸಮರ ಸಾರಿದ ದಿಟ್ಟಮಹಿಳೆ ವೀರರಾಣಿ ಕಿತ್ತೂರು ಚನ್ನಮ್ಮ. 1824ರ ಅಕ್ಟೋಬರ್ 23ರಂದು ಬ್ರಿಟಿಷ್ ಸೈನ್ಯವನ್ನು ಹಿಮ್ಮೆಟ್ಟಿಸಿ, ಆಂಗ್ಲ ಅಧಿಕಾರಿ ಥ್ಯಾಕರೆ ಸಮೇತ ಹಲವರನ್ನು ಯಮಪುರಿಗೆ ಅಟ್ಟಿದಳು. ವಿಜಯಮಾಲೆ ತನ್ನದಾಗಿಸಿಕೊಂಡಳು. ಆ ಗೆಲುವಿನ ಸವಿನೆನಪಿಗಾಗಿ ಪ್ರತಿ ವರ್ಷ ಕಿತ್ತೂರು ಉತ್ಸವ ಆಚರಿಸಲಾಗುತ್ತಿದೆ.

| ರಾಯಣ್ಣ ಆರ್.ಸಿ. ಬೆಳಗಾವಿ

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕಿತ್ತೂರು ಸಂಸ್ಥಾನದ ಹೆಸರು ಅಜರಾಮರವಾಗಿ ಉಳಿದಿದೆ. ಓರ್ವ ಮಹಿಳೆಯಾಗಿ ಕಿತ್ತೂರು ಚನ್ನಮ್ಮ ಹೋರಾಡಿದ ರೀತಿ, ಆಕೆಯ ದೇಶಭಕ್ತಿಯ ಕಿಚ್ಚು ಕನ್ನಡನಾಡನ್ನೂ ದಾಟಿ ಪಸರಿಸಿದೆ. ಇಡೀ ದೇಶ ದಾಸ್ಯದ ಸಂಕೋಲೆಯಲ್ಲಿದ್ದಾಗ ಬ್ರಿಟಿಷ್ ಕುಟೀಲ ನೀತಿ ವಿರುದ್ಧ ಬಂಡೆದ್ದ ಮೊಟ್ಟಮೊದಲ ಹೋರಾಟಗಾರ್ತಿ ಚನ್ನಮ್ಮ. ಪ್ರತಿ ವರ್ಷ ಅಕ್ಟೋಬರ್ 23ರಂದು ಜಿಲ್ಲಾಡಳಿತ ಕಿತ್ತೂರಿನ ಸುತ್ತಮುತ್ತ ಲಿನ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಕಿತ್ತೂರು ಉತ್ಸವವನ್ನು ಸಂಭ್ರಮದಿಂದ ಆಚರಿಸುತ್ತದೆ. ಈ ಬಾರಿ 2 ದಿನಗಳ ಕಾಲ ಕಿತ್ತೂರು ಉತ್ಸವ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರಿನ ಕೊಡುಗೆ ಅಪಾರ. ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ಸಿಡಿದೆದ್ದ ವೀರರಾಣಿ ಚನ್ನಮ್ಮಳು ಈ ಹೋರಾಟಕ್ಕೆ ನಾಂದಿ ಹಾಡಿದ್ದು ಕಿತ್ತೂರಿನಲ್ಲಿಯೇ ಎಂಬುದು ಸಾರ್ವಕಾಲಿಕ ದಾಖಲೆಯಾಗಿ ಉಳಿದಿದೆ. ಕ್ರಿ.ಶ. 1585ಕ್ಕಿಂತ ಹಿಂದಿನ ಕಿತ್ತೂರು ಸಂಸ್ಥಾನವನ್ನು ಮೈಸೂರು ರಾಜ್ಯದ ಕಡೆಯಿಂದ ಆಗಮಿಸಿದ್ದ ಹಿರೇಮಲ್ಲಪ್ಪಶೆಟ್ಟಿ ಮತ್ತು ಚಿಕ್ಕಮಲ್ಲ ಶೆಟ್ಟಿ ಎಂಬುವರು ಸುಲ್ತಾನ್ ಆದಿಲ್​ಶಾಹಿ ಅವರಿಂದ ದಾನವಾಗಿ ಪಡೆದಿದ್ದರು.

ಥ್ಯಾಕರೆ ಜತೆ ಸಮರ: ಧಾರವಾಡ ಜಿಲ್ಲಾ ಮುಖ್ಯಸ್ಥನಾಗಿದ್ದ ಬ್ರಿಟಿಷ್ ಅಧಿಕಾರಿ ಥ್ಯಾಕರೆ ಈ ದತ್ತು ಸ್ವೀಕಾರವನ್ನು ಪ್ರಬಲವಾಗಿ ವಿರೋಧಿಸಿದ. ಅಲ್ಲದೆ, ಕಿತ್ತೂರು ಸಂಸ್ಥಾನವನ್ನು ಬ್ರಿಟಿಷ ಸಾಮ್ರಾಜ್ಯದಲ್ಲಿ ಸೇರಿಸಿ ಕೊಳ್ಳುವ ಕುತಂತ್ರ ನಡೆಸಿದ. ಚನ್ನಮ್ಮ ಥ್ಯಾಕರೆಯ ಆದೇಶವನ್ನು ಧಿಕ್ಕರಿಸಿದಳು. ಕಿತ್ತೂರು ಸಂಸ್ಥಾನದ ಎಲ್ಲ ಸರದಾರರು ಮತ್ತು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಚನ್ನಮ್ಮ, ‘ಕಿತ್ತೂರು ನಾಡು ನಮ್ಮದು, ನಮಗೆ ನಾವೇ ಸಾಮ್ರಾಟರು. ದತ್ತು ಸ್ವೀಕಾರ ವಿರೋಧಿಸುತ್ತಿರುವ ಬ್ರಿಟಿಷರ ಆದೇಶಕ್ಕೆ ಬೆಲೆಯಿಲ್ಲ’ ಎಂದು ಆರ್ಭಟಸಿದಳು. ಸಾಮ್ರಾಜ್ಯದ ಉಳಿವಿಗಾಗಿ ಬ್ರಿಟಿಷರ ವಿರುದ್ಧ ಖಡ್ಗ ಝುಳಪಿಸಿದಳು. ಬ್ರಿಟಿಷರ ವಿರುದ್ಧ ಸಮರ ಸಾರಿದ ಕಿತ್ತೂರು ಚನ್ನಮ್ಮ 1824ರ ಅಕ್ಟೋಬರ್ 23ರಂದು ಬ್ರಿಟಿಷ್ ಅಧಿಕಾರಿ ಥ್ಯಾಕರೆ ಸಮೇತ ಹಲವು ಸೈನಿಕರನ್ನು ಯಮಪುರಿಗೆ ಅಟ್ಟಿದಳು. ವಿಜಯಮಾಲೆಯನ್ನು ತನ್ನದಾಗಿಸಿಕೊಂಡಳು. ಆ ದಿನವನ್ನು ಈಗ ಜಿಲ್ಲಾಡಳಿತ ಕಿತ್ತೂರು ಉತ್ಸವವನ್ನಾಗಿ ಆಚರಿಸುತ್ತಿದೆ.

ಜನಮನದಲ್ಲಿ ಚಿರಸ್ಥಾಯಿ: ಕ್ರಿ.ಶ. 1824 ವರ್ಷದ ಅಂಚಿನಲ್ಲಿ ಕಿತ್ತೂರಿಗೆ ದುರ್ದಿನ ಬಂದೊದಗಿತು. ಬ್ರಿಟಿಷರು ಕೋಟೆಯ ಗುಪ್ತಮಾರ್ಗದಿಂದ ಒಳನುಗ್ಗಿದರು. ಗುರುಸಿದ್ಧಪ್ಪ, ಸಂಗೊಳ್ಳಿ ರಾಯಣ್ಣ ಮೊದಲಾದವರು ರಾಣಿಯನ್ನು ಗುಪ್ತಮಾರ್ಗದಿಂದ ದಾಟಿಸಲು ಹರಸಾಹಸ ಮಾಡಿದರು. ಕೊನೆಗೆ ಎಲ್ಲರ ಪ್ರಯತ್ನಗಳು ನಿಷ್ಪಲವಾದವು. ಆಗಿನ ಚಾಪ್ಲಿನ್ ದೊರೆಯು, ಚನ್ನಮ್ಮ ರಾಣಿಯನ್ನು ಬಂಧಿಸಿ, ಬೈಲಹೊಂಗಲ ಕೋಟೆಯ ಕಾರಾಗೃಹದಲ್ಲಿ ಇರಿಸಿದ. ವರ್ಷಗಟ್ಟಲೇ ಕಾರಾಗೃಹದಲ್ಲಿ ಏಕಾಂಗಿಯಾಗಿ ಕಾಲ ಕಳೆದ ಚನ್ನಮ್ಮ ಅಲ್ಲೇ ಐಕ್ಯಳಾದಳು. ಚನ್ನಮ್ಮನ ಸಾಹಸ ಕಾರ್ಯಗಳು ಕಿತ್ತೂರಿನ ಉಜ್ವಲ ಹಾಗೂ ವೈಭವಪೂರ್ಣ ಇತಿಹಾಸವು ಅಸಂಖ್ಯಾತ ಕವಿತೆ, ಜನಪದ ಹಾಡುಗಳ ಮೂಲಕ ಜನತೆಯ ಮನಸ್ಸಿನಲ್ಲಿ ಇಂದಿಗೂ ಹಸಿರಾಗಿ ಉಳಿದಿದೆ. ಚನ್ನಮ್ಮಳ ಸ್ವಾತಂತ್ರ್ಯಪ್ರೇಮ, ಕರ್ತವ್ಯನಿಷ್ಠೆ, ಸಾಹಸಮಯ ಜೀವನ ಎಲ್ಲ ಕಾಲಕ್ಕೂ ಎಲ್ಲರಿಗೂ ಆದರ್ಶಪ್ರಾಯವಾಗಿದೆ.

ಹೀಗಿತ್ತು ಕಿತ್ತೂರು ಸಂಸ್ಥಾನ: ಕಿತ್ತೂರು ಸಂಸ್ಥಾನವನ್ನು ಆಳಿದ 12 ರಾಜರುಗಳ ಪೈಕಿ ಮಲ್ಲಸರ್ಜ ರಾಜ ಬಹಳ ಖ್ಯಾತಿ ಪಡೆದವನು. ಅವನು 1782ರಿಂದ 1816ರವರೆಗೆ ರಾಜ್ಯಭಾರ ನಡೆಸಿದ. ಅವನ ಕಾಲದಲ್ಲಿ ಕಿತ್ತೂರು ಸಾಮ್ರಾಜ್ಯ ವೈಭವದ ಸ್ಥಿತಿಯಲ್ಲಿತ್ತು. ಆತನಿಗೆ ರುದ್ರಮ್ಮ ಮತ್ತು ಚನ್ನಮ್ಮ ಎಂಬ ಇಬ್ಬರು ಪತ್ನಿಯರು. ಅವರಲ್ಲಿ ರಾಣಿ ಚನ್ನಮ್ಮ ರಾಜ್ಯಾಡಳಿತದಲ್ಲಿ ಮತ್ತು ರಣರಂಗದಲ್ಲೂ ಪತಿಗೆ ಜತೆಯಾದಳು. ವಿಶಿಷ್ಟ ವ್ಯಕ್ತಿತ್ವದ ಚನ್ನಮ್ಮ ಪತಿಯೊಂದಿಗೆ ಸ್ನೇಹಮಯಿಯಾಗಿಯೂ, ದಾರ್ಶನಿಕಳಾಗಿಯೂ ಜೀವನ ಸಾಗಿಸುತ್ತಿದ್ದಳು. ಪತಿಯ ಮರಣಾನಂತರ ರಾಜ್ಯಭಾರದ ಹೊಣೆ ಹೊತ್ತ ಚನ್ನಮ್ಮ, ಶಿವಲಿಂಗ ರುದ್ರ ಸರ್ಜನನನ್ನು ಮುಖ್ಯಸ್ಥ ನನ್ನಾಗಿ ಮಾಡಿ ರಾಜ್ಯಭಾರ ನಡೆಸಿದಳು. ದಿನಗಳೆದಂತೆ ಶಿವಲಿಂಗರುದ್ರನ ಆರೋಗ್ಯ ಹದಗೆಟ್ಟಾಗ ಮಾಸ್ತಮರಡಿಯ ಬಾಳಪ್ಪಗೌಡ ಅವರ ಮಗ ಶಿವಲಿಂಗಪ್ಪ ನನ್ನು ದತ್ತು ಸ್ವೀಕರಿಸಲು ನಿರ್ಧರಿಸಿದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net