

ಮಂಡ್ಯ: ಪ್ರಸ್ತುತ ಸನ್ನಿವೇಶದಲ್ಲಿ ಜನಪದ ಕಲೆಗಳು ಮಾಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕಾವ್ಯಶ್ರೀ ಹೇಳಿದರು.
ನಗರದ ಪೊಲೀಸ್ ಕಾಲನಿಯಲ್ಲಿರುವ ಮೆಟ್ರಿಕ್ ಪದವಿ ಪೂರ್ವ ಬಾಲಕರ ವಸತಿ ನಿಲಯದ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯ ಕಲಾ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು, ಹಾಸ್ಟೆಲ್‌ಗಳು ಎಂದರೆ ಊಟ, ವಸತಿ ಎರಡೇ ನಮಗೆ ನೆನಪಾಗುವುದು. ಅದನ್ನು ಮೀರಿ ಮಕ್ಕಳ ಕೌಶಲ್ಯದ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆ ಶ್ರಮಿಸುತ್ತಿದೆ. ಕಲಿಯುವ ಹಂತದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೇ ಲವಲವಿಕೆಯಿಂದ ಕಲಿಯಿರಿ. ಸಮಾಜ ಇಲಾಖೆಯ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಮಾತನಾಡಿ, ವಿದ್ಯಾಭ್ಯಾಸದ ಜತೆಗೆ ಸಾಂಸ್ಕೃತಿಕ ಕಲೆಗಳ ಅಭ್ಯಾಸವು ಮುಖ್ಯ. ಯಾವುದೇ ಕಲೆಯನ್ನು ಬಲವಂತದಿಂದ ಅಭ್ಯಸಿಸಲು ಸಾದ್ಯವಿಲ್ಲ. ಆದ್ದರಿಂದ ಕಲೆಯನ್ನು ಪ್ರೀತಿಸಿ. ಪರಿಶಿಷ್ಟ ಪಂಗಡ ಉಪಯೋಜನೆಯಡಿ ವಾರದಲ್ಲಿ ಮೂರು ದಿನ ಪ್ರತಿದಿನ 2 ಗಂಟೆಯಂತೆ ಕಲೆಗಳನ್ನು ಗುರುಗಳ ಮೂಲಕ 6 ತಿಂಗಳ ಕಾಲ ಹೇಳಿ ಕೊಡಲಾಗುವುದು ಎಂದರು.
ನಗರಸಭೆ ಸದಸ್ಯ ಎಂ.ಎನ್.ಶ್ರೀಧರ್ ಮಾತನಾಡಿ, ನನ್ನ ಅನೇಕ ಸ್ನೇಹಿತರು ಸಮಾಜದ ಮುಖ್ಯವಾಹಿನಿಗಳಲ್ಲಿ ಕಲಾವಿದರಾಗಿದ್ದಾರೆ. ಆಸಕ್ತಿ ವಹಿಸಿ ಕಲಿತಾಗ ಮಾತ್ರ ಕಲೆ ನಮಗೆ ಒಲಿಯುತ್ತದೆ. ಕೇವಲ ಒಂದೇ ವಿಧದ ಸಂಗೀತಕ್ಕೆ ನಿಮ್ಮ ಧ್ವನಿಯನ್ನು ಒಗ್ಗಿಸಿಕೊಳ್ಳಬೇಡಿ ವಿವಿಧ ವಿಧದ ಸಂಗೀತವನ್ನು ಅಭ್ಯಾಸ ಮಾಡಿಕೊಳ್ಳಿ. ಎಲ್ಲ ಬಗೆಯ ಸಂಗೀತಗಳಿಗೆ ಮೂಲ ಜನಪದ ಸಂಗೀತ, ಇದರಿಂದ ಇಂದು ಅನೇಕ ಸಂಗೀತ ಸ್ವರಗಳು ಉದ್ಭವಿಸಿದೆ ಎಂದು ಹೇಳಿದರು.
ವಸತಿ ನಿಲಯದ ಮೇಲ್ವಿಚಾರಕಿಯರಾದ ಟಿ.ಜಿ.ಜ್ಯೋತಿ, ವೈ.ಡಿ.ನಿರ್ಮಲಾ, ಲತಾ, ಸುಗಮ ಸಂಗೀತ ಗಾಯಕಿ ಸರ್ವ ಮಂಗಳಾ, ತಮಟೆ ವಾದಕರಾದ ಟಿ.ಕೆ ರಾಜಶೇಖರ್, ಸೋಮು ಆನಂದ್, ದೇವರಾಜ್ ಇತರರಿದ್ದರು.